ಕಮರದಿರಲಿ 'ಕರಿಮನೆ' ಬದುಕು...
ಹೊಸನಗರ: ಅರಣ್ಯ ಒತ್ತುವರಿ ಸಂಬಂಧ ಎಕರೆಗಟ್ಟಲೆ ಅಡಕೆ ತೋಟ ತೆರವುಗೊಳಿಸಿದ ಪ್ರಕರಣದ ಭೀತಿ ಮಾಸುವ ಮುನ್ನವೇ ಇಲ್ಲೊಂದು ಇಡೀ ಗ್ರಾಮವೇ ಒಕ್ಕಲೆಬ್ಬಿಸುವ ಭೀತಿಗೆ ಸಿಲುಕಿದೆ.
ಆತಂಕ ಮನೆ ಮಾಡಿರುವುದು ಹೊಸನಗರ ತಾಲೂಕಿನ ಕರಿಮನೆ ಗ್ರಾಮದಲ್ಲಿ. ಸುಮಾರು 250 ಕುಟುಂಬಗಳಿರುವ ಈ ಗ್ರಾಮದಲ್ಲೀಗ ಭೀತಿಯ ಕಾರ್ಮೋಡ ವ್ಯಾಪಿಸಿದೆ. ಕರಿಮನೆ ಗ್ರಾಮದ ಸರ್ವೇ ನಂ.8, 72, 106, 126, 144, 189ರಲ್ಲಿ ಸುಮಾರು 1650 ಎಕರೆ ಭೂಮಿಯಿದೆ. ಹಿಂದೆ ಗೋಮಾಳದ ಹೆಸರಿನಲ್ಲಿನಲ್ಲಿದ್ದು ಸಿ ಮತ್ತು ಡಿ ವರ್ಗೀಕರಣ ಮಾಡಿ ಸೂಚಿತ ಅರಣ್ಯಕ್ಕೆ ಬದಲಾಯಿಸಲಾಗಿದೆ. ನಂತರ ಒಕ್ಕಲೆಬ್ಬಿಸಿ ಅರಣ್ಯ ಅಭಿವೃದ್ಧಿ ಕೈಗೊಳ್ಳುವ ಹುನ್ನಾರ ನಡೆಯುತ್ತಿದೆ.
ಸರ್ವೇ ನಂ.106ರಲ್ಲಿ ಆಶ್ರಯ ಯೋಜನೆಗಳಲ್ಲಿ ಸುಮಾರು 86 ಸೈಟ್ ನೀಡಿದ್ದು, ಫಲಾನುಭವಿಗಳಲ್ಲಿ ಈ ಸಂಬಂಧ ಹಕ್ಕುಪತ್ರದ ದಾಖಲೆ ಇದೆ. ಮಾತ್ರವಲ್ಲ ಗ್ರಾಪಂ ಕಚೇರಿ ಕಟ್ಟಡ, ದೇವಸ್ಥಾನ ಕೂಡ ಸೇರಿದಂತೆ ಬಹುತೇಕ ಮನೆಗಳು ಕೂಡ ಸೂಚಿತ ಅರಣ್ಯವನ್ನಾಗಿ ಗುರುತಿಸಲಾಗಿದೆ. 1650 ಎಕರೆ ಪ್ರದೇಶದಲ್ಲಿ ಯಾವುದೇ ಜಾಗದ ಆರ್ಟಿಸಿ ತೆಗೆದರೂ ಕೂಡ ದನದ ಮುಫತ್ತು ಎಂದು ಬರುತ್ತಿತ್ತು. ಪ್ರಸ್ತುತ ಅದರೊಂದಿಗೆ ಫಿಎಫ್ ದಾಖಲಾಗಿದ್ದು ಜನ ದಿಕ್ಕು ತೋಚದಂತಾಗಿದ್ದಾರೆ.
ಅಧಿಕಾರಿಗಳನ್ನು ತಡೆದರು: ಮುಂದುವರೆದ ಭಾಗವಾಗಿ ಕರಿಮನೆ ಗ್ರಾಮ ಸರ್ವೇ ನಂ. 8ರಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಪ್ಲಾಂಟೇಷನ್ ಮಾಡಲು ಅರಣ್ಯ ಇಲಾಖೆ ಮುಂದಾಗಿದ್ದು, ಇದಕ್ಕೆ ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಎರಡೆರಡು ಬಾರಿ ಬಂದ ಅಧಿಕಾರಿಗಳನ್ನು ತಡೆಗಟ್ಟಿ ವಾಪಸ್ ಕಳುಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಿಮನೆ ಗ್ರಾಮದ ಒಟ್ಟು ಜಾಗ ಹಿಂದೆ ದನದ ಮುಫತ್ತು ಎಂದು ದಾಖಲಾಗಿದ್ದು ಇದೀಗ ದನದ ಮುಫತ್ತು ಮತ್ತು ಸೂಚಿತ ಅರಣ್ಯವಾಗಿ ಪರಿವರ್ತಿತವಾಗಿದೆ. 1,650 ಎಕರೆಯಲ್ಲಿ ಸುಮಾರು 962.24 ಎಕರೆ ಮಾತ್ರ ಸೂಚಿತ ಅರಣ್ಯವಾಗಿದೆ ಎಂದು ಅರಣ್ಯ ಇಲಾಖೆ ಹೇಳುತ್ತದೆ.
ಸರ್ವೇ ನಂ.8ರಲ್ಲಿ 72, 72ರಲ್ಲಿ 205.20, 144ರಲ್ಲಿ 186, 189ರಲ್ಲಿ 230.12, 164ರಲ್ಲಿ 34.24, 126ರಲ್ಲಿ 23.08 ಎಕರೆ ಪ್ರದೇಶ ಮಾತ್ರ ಅರಣ್ಯಕ್ಕೆ ಪ್ರಸ್ತಾವನೆಗೊಂಡಿದೆ. ಅದರಲ್ಲೂ ಜನವಸತಿ ಇರುವ ಸರ್ವೇ ನಂ.106 ಪೂರ್ತಿಯಾಗಿ ಹಾಗೆ ಉಳಿದಿದೆ. ಆದರೆ ಆರ್ಟಿಸಿ ಕಾಲಂನಲ್ಲಿ ಪೂರ್ತಿಯಾಗಿ ಫಿಎಫ್ ಬರುತ್ತಿರುವ ಬಗ್ಗೆ ಪರಿಶೀಲಿಸಬೇಕಾಗಿದೆ ಎಂಬುದು ಅರಣ್ಯ ಇಲಾಖೆ ಉತ್ತರ.
ಇಂದು ಉಸ್ತುವಾರಿ ಸಚಿವರ ಚರ್ಚೆ
ಹೊಸನಗರ: ಕರಿಮನೆ ಇಡೀ ಗ್ರಾಮದ ಸುಮಾರು 1650 ಎಕರೆ ಪ್ರದೇಶವನ್ನು ಅರಣ್ಯವಾಗಿ ಪರಿವರ್ತಿಸಲು ಗುರುತಿಸಿಲಾಗಿದೆ ಎಂಬ ಕಾರಣಕ್ಕೆ ಗ್ರಾಮಸ್ಥರು ಆತಂಕಗೊಂಡಿರುವ ಹಿನ್ನಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮತ್ತು ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಶನಿವಾರ ಬೆಳಿಗ್ಗೆ ಮಾಸ್ತಿಕಟ್ಟೆಗೆ ಆಗಮಿಸುವ ಸಚಿವರು, ಪ್ರವಾಸಿ ಮಂದಿರಕ್ಕೆ ಅರಣ್ಯಅಧಿಕಾರಿಗಳಿಗೆ ಕಡತದೊಂದಿಗೆ ಬರಲು ಸೂಚಿಸಿದ್ದಾರೆ. ಮುಂದೆ ಎದುರಾಗಬಹುದಾದ ಸಮಸ್ಯೆ ಮತ್ತು ಮಾರ್ಗೋಪಾಯದ ಬಗ್ಗೆ ಚರ್ಚಿಸಲಿದ್ದಾರೆ ಎಂದು 'ಕನ್ನಡಪ್ರಭ'ಕ್ಕೆ ಮೂಲಗಳು ತಿಳಿಸಿವೆ.
ಎರಡು ಜಲಾಶಯ
ಈಗಾಗಲೇ ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಚಕ್ರಾ ಮತ್ತು ಸಾವೇಹಕ್ಲು ಎರಡು ಜಲಾಶಯಗಳು ನಿರ್ಮಾಣಗೊಂಡು ಸಾವಿರಾರು ಎಕರೆ ರೈತರ ಭೂಮಿ ಹಿನ್ನೀರಿಗೆ ಆಹುತಿಯಾಗಿವೆ. ಸಂತ್ರಸ್ತರಾದ ನೂರಾರು ಕುಟುಂಬಗಳಿಗೆ 3 ದಶಕ ಕಳೆದರೂ ಸೂಕ್ತ ಪುನರ್ ವಸತಿಯಾಗಲಿ, ಸಮರ್ಪಕ ಪರಿಹಾರವಾಗಲಿ ಒದಗಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಇಡೀ ಕರಿಮನೆ ಗ್ರಾಮ ಸಾವಿರಾರು ಎಕರೆ ಪ್ರದೇಶವನ್ನು ಪ್ರಪೋಷಲ್ ಫಾರೆಸ್ಟ್ ಆಗಿ ವರ್ಗಾಯಿಸಿ ಅರಣ್ಯವಾಗಿ ಪರಿವರ್ತನೆ ಆಗಿದ್ದೇ ಆದಲ್ಲಿ ಗ್ರಾಮಸ್ಥರ ಬದುಕು ಅತಂತ್ರವಾಗುವುದು ಮಾತ್ರ ನಿಜ.
ದನದ ಮುಫತ್ತಿನ ಜಾಗವನ್ನು ಅರಣ್ಯಕ್ಕೆ ವರ್ಗಾಯಿಸಲು ಅವಕಾಶ ನೀಡುವುದಿಲ್ಲ. ತಲೆತಲಾಂತರದಿಂದ ಬದುಕಿ ಬಾಳಿದ ಭೂಮಿಯನ್ನು ಬಿಡುವುದಿಲ್ಲ. ಬೇಕಾದರೆ ಪ್ರಾಣವನ್ನೇ ಕೊಡಲು ಹಿಂಜರಿಯುವುದಿಲ್ಲ. ಈ ಬಗ್ಗೆ ಸರ್ಕಾರ, ಅಧಿಕಾರಿಗಳು ಮುಗ್ಧ ರೈತರ ನೆರವಿಗೆ ಧಾವಿಸಲಿ.
- ಸಾದಗಲ್ ಅಂಬರೀಷ್, ಸ್ಥಳೀಯರು
ಜನವಸತಿ ಇರುವ ಪ್ರದೇಶವನ್ನು ಪ್ರಪೋಷಲ್ ಫಾರೆಸ್ಟ್ ಆಗಿ ವರ್ಗಾಯಿಸಿರುವುದು ಸರಿಯಲ್ಲ. ಗ್ರಾಮದ ವಾಸ್ತವ ಚಿತ್ರಣದ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಲಿ. ಒಕ್ಕಲೆಬ್ಬಿಸುವುದೇ ನಿಜವಾಗಿದ್ದರೆ ಅದಕ್ಕೂ ಮುನ್ನ ಸೂಕ್ತ ಪುನರ್ ವಸತಿ ಕಲ್ಪಿಸುವುದು ಅಗತ್ಯ.
- ಸಿ.ರಾಮಚಂದ್ರರಾವ್, ಸದಸ್ಯರು ಎಪಿಎಂಸಿ
-ರವಿ ಬಿದನೂರು