ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಳಪೆ ಕಾಮಗಾರಿ: ಕ್ರಿಮಿನಲ್ ಕೇಸ್

Lingaraj Badiger
Updated On : 23 Nov 2013, 10:45 am

ಕ.ಪ್ರ.ವಾರ್ತೆ, ಸಾಗರ/ತ್ಯಾಗರ್ತಿ, ನ. 22
ಅಕ್ಷರ ದಾಸೋಹ ಕೊಠಡಿಯ ಕಳಪೆ ಕಾಮಗಾರಿ ನಿರ್ವಹಣೆಯಿಂದಾಗಿ ಕಿಟಕಿ, ಬಾಗಿಲುಗಳು ಹಾಕದ ಸ್ಥಿತಿ ಇದ್ದು, ಕಟ್ಟಡ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡುವುದರ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ. ಬಿ. ಉದಯಕುಮಾರ್ ಶೆಟ್ಟಿ ಹೇಳಿದರು.
ಸಾಗರ ತಾಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಡಿನಾಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿ, ಗುರುವಾರ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿಗೆ ವಿಷ ಮಿಶ್ರಣ ಮಾಡಿರುವ ಕುರಿತು ಪರಿಶೀಲನೆ ನಡೆಸಿ, ಮುಖ್ಯ ಶಿಕ್ಷಕರನ್ನು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಷೋಕಾಸ್ ನೋಟಿಸ್: ಒಂದೊಮ್ಮೆ ವಿಷಮಿಶ್ರಿತ ಹಾಲನ್ನು ಮಕ್ಕಳು ಕುಡಿದಿದ್ದರೆ ದೊಡ್ಡ ಮಟ್ಟದ ಅಪಾಯ ಸಂಭವಿಸುತಿತ್ತು. ಅಡುಗೆ ಸಿಬ್ಬಂದಿ ಅಪಾಯ ತಪ್ಪಿಸಿದ್ದಾರೆ. ಆದರೆ, ಕಿಟಕಿಯ ಪಕ್ಕದಲ್ಲಿ ಅಡುಗೆ ಸಾಮಗ್ರಿ ಇರಿಸಿರುವ ಅಡುಗೆ ಸಿಬ್ಬಂದಿ, ಸೂಕ್ತ ಪರಿಶೀಲನೆ ನಡೆಸದ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕಾರಣ ಕೇಳಿ ಷೋಕಾಸ್ ನೋಟಿಸ್ ನೀಡಲಾಗುವುದು. ವಿಷ ಮಿಶ್ರಣ ಮಾಡಿರುವ ಹಾಲಿನ ಪುಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ತ್ವರಿತ ಕ್ರಮ ಕೈಗೊಂಡಿದ್ದಾರೆ ಎಂದರು.
ಮುಂಜಾಗ್ರತಾ ಕ್ರಮ: ಮುಂದೆ ಇಂತಹ ಘಟನೆ ನಡೆಯದಂತೆ ಕೆಲವು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಉಪ ವಿಭಾಗ ವ್ಯಾಪ್ತಿಯ ಸಾಗರ, ಹೊಸನಗರ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳಲ್ಲಿನ ಪ್ರತಿಯೊಂದು ಶಾಲೆಗೆ ಭೇಟಿ ನೀಡಿ ಬಿಸಿಯೂಟ ಯೋಜನೆಗೆ ಸಂಬಂಧಪಟ್ಟ ಕಟ್ಟಡ ನಿರ್ಮಾಣ, ಅಗ್ನಿನಿರೋಧಕ ಸಿಲಿಂಡರ್ ಬಳಕೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡ ನಾಲ್ಕು ತಂಡ ರಚಿಸಿ, ಪರಿಶೀಲನೆ ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.
ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಹೊನ್ನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಲಿಂಗಪ್ಪ ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement