'ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ'
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ನ. 22
ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ. ನ್ಯಾಯವಾಗಿದ್ದಲ್ಲಿ ಕೆಲಸವನ್ನು ತಕ್ಷಣ ಮಾಡಿಕೊಡಿ. ಕೆಲಸವಾಗದಿದ್ದರೆ ಆಗುವದಿಲ್ಲ ಎಂದು ಕಾರಣಕೊಟ್ಟು ತಿಳಿಸಿ, ಅನಾವಶ್ಯಕ ತೊಂದರೆ ಕೊಟ್ಟರೆ ನಿಮಗೆ ತೊಂದರೆ ತಪ್ಪಿದ್ದಲ್ಲಾ ಎಂದು ಲೋಕಾಯುಕ್ತ ಡಿಎಸ್ಪಿ ಎಂ.ಪಿ. ನಾಗರಾಜ್ ಅಧಿಕಾರಿಗಳಿಗೆ ತಿಳಿಸಿದರು.
ಶಿರಾಳಕೊಪ್ಪ ಪಪಂ ಕಚೇರಿಯ ಸಭಾಂಗಣದಲ್ಲಿ ಶಿರಾಳಕೊಪ್ಪ ಭಾಗದ ಎಲ್ಲ ಇಲಾಖೆಗಳ ಸಿಬ್ಬಂದಿಯನ್ನು ಕರೆಸಿ ಮಾತನಾಡಿದರು.
ಸಾರ್ವಜನಿಕರ ಕೆಲವು ಸಮಸ್ಯೆಗಳನ್ನು ಅಲ್ಲಿಯೇ ಇತ್ಯರ್ಥ ಪಡಿಸಲು ಪ್ರಯತ್ನಿಸಿ ಇತರ ಇಲಾಖೆಗಳಿಂದ ಆಗುವ ಕೆಲಸಕಾರ್ಯಗಳ ಬಗ್ಗೆ ಅರ್ಜಿ ಸ್ವೀಕರಿಸಿ ಆ ಇಲಾಖೆಯ ಗಮನಕ್ಕೆ ತರಲಾಗುವದು ಎಂದರು.
ಸಭೆಯಲ್ಲಿ ತಾಳಗುಂದ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಇಲ್ಲದಿರುವ ಹಾಗು ಸಿಬ್ಬಂದಿ ಇಲ್ಲದಿರುವ ಬಗ್ಗೆ ಹಾಗು ಪಟ್ಟಣದ ಹಲವಾರು ಸಮಸ್ಯೆಯನ್ನು ಅವರ ಗಮನಕ್ಕೆ ತರಲಾಯಿತು.
ಆಸ್ಪತ್ರೆಗೆ ಭೇಟಿ: ಇಲ್ಲಿಯ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಸ್ಥಳದಲ್ಲಿ ಒಬ್ಬ ವೈದ್ಯರು ಮಾತ್ರ ಕಂಡುಬಂದಾಗ ಇತರ ವೈದ್ಯರ ಬಗ್ಗೆ ಪ್ರಶ್ನಿಸಿದರು.
ಆಸ್ಪತ್ರೆಯಲ್ಲಿ ಇಬ್ಬರು ಆಯುಷ್ ವೈದ್ಯರು ಇರುವದಾಗಿ ತಿಳಿಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಿವಮೊಗ್ಗಕ್ಕೆ ಮೀಟಿಂಗಿಗೆ ಹೋಗಿರುವದಾಗಿ ತಿಳಿಸಿದರು.
ಆಸ್ಪತ್ರೆಯಲ್ಲಿ ಇದ್ದ ಕುಡಿಯುವ ನೀರಿನ ಫಿಲ್ಟರ್ನಲ್ಲಿಯ ಕೊಳೆ ನೋಡಿ ವೈದ್ಯರಾದ ನೀವು ಕುಡಿಯುವ ನೀರಿನ ಫಿಲ್ಟರ್ನ ಕೊಳೆಯನ್ನು ನೋಡಿಲ್ಲವೆಂದರೆ ಹೇಗೆ. ಪ್ರತಿದಿನ ಕುಡಿಯುವ ನೀರಿನ ಫಿಲ್ಟರ್ ಶುಚಿಯಾಗಿ ಇಡಬೇಕು.
ಹಾಗೆಯೇ ಎಲ್ಲ ಅವ್ಯವಸ್ಥೆಯನ್ನು ಮುಂದಿನವಾರ ಬರುವವೇಳೆಗೆ ಸರಿಪಡಿಸಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಇನ್ಸಪೆಕ್ಟರ್ ಪುರುಷೋತ್ತಮ,ಪಾಪೇಗೌಡ ಹಾಗು ಸಂಜೀವ ಪಪಂ ಮುಖ್ಯಧಿಕಾರಿ ರಾಜ್ ಕುಮಾರ್ ಸೇರಿದಂತೆ ಇತರರು ಇದ್ದರು.