ಅಡಕೆ ಬೆಳೆಗಾರರ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸಲಿ
ಕ.ಪ್ರ.ವಾರ್ತೆ ಟಿ ಸಾಗರ ಟಿ ನ.23
ಅಡಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಅಡಕೆ ಸಂಬಂಧಿತ ಸಂಘ- ಸಂಸ್ಥೆಗಳು ಹಾಗೂ ಅಡಕೆ ಬೆಳೆಯುವ ಪ್ರದೇಶದಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಹೆಚ್ಚು ನಿಗಾ ವಹಿಸಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಪಟ್ಟಣದ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ನೀಡಿದ ಗೌರವ ಸ್ವೀಕರಿಸಿ, ಅಡಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸಂಘ- ಸಂಸ್ಥೆಗಳು ಸಂಘಟಿತ ಹೋರಾಟ ನಡೆಸುತ್ತಿಲ್ಲ. ಶಾಸನ ಸಭೆಯಲ್ಲಿ ಅಡಕೆ ಬೆಳೆಯುವ ಪ್ರದೇಶದಿಂದ ಆಯ್ಕೆಯಾದವರು ಗಟ್ಟಿಯಾಗಿ ಮಾತನಾಡುತ್ತಿಲ್ಲ ಎಂದರು.
ದೊಡ್ಡ ಹೋರಾಟ ಅಗತ್ಯ: ಅಡಕೆ ಬೆಳೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಪದ್ಧತಿ ಜೊತೆಗೆ ಹೊಸ ಚಿಂತನೆ, ಆಲೋಚನೆ ನಡೆಯಬೇಕು ಎಂದು ಹೇಳಿದ ಕಾಗೋಡು, ಅಡಕೆ ಆರೋಗ್ಯಕ್ಕೆ ಹಾನಿಕರ ಎಂದು ಈಗಾಗಲೇ ಕೇಂದ್ರ ಸರ್ಕಾರದ ಮಟ್ಟದಲ್ಲಿ ಉಲ್ಲೇಖವಾಗಿದೆ. ಅದು ಹಾನಿಕರ ಅಲ್ಲ ಎಂಬ ಬಗ್ಗೆ ಕಾನೂನಾತ್ಮಕವಾಗಿ, ಶಾಸನಸಭೆಯ ಮಟ್ಟದಲ್ಲಿ ದೊಡ್ಡ ಹೋರಾಟ ನಡೆಯಬೇಕು. ಈ ನಿಟ್ಟಿನಲ್ಲಿ ಬೆಳೆಗಾರ ಸಂಘಟನೆಗಳು ಸಂಘಟಿತ ಪ್ರಯತ್ನ ಮಾಡದಿದ್ದರೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕೊಳೆ ರೋಗಕ್ಕೆ ಎಕರೆಗೆ 25 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಲಾಗಿತ್ತು. ಕೇಂದ್ರದಿಂದ ಸಹಾಯ ಬರುತ್ತದೆ ಎನ್ನುವ ನಿರೀಕ್ಷೆಯಿಂದ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡುವ ಚಿಂತನೆ ನಡೆಸಿತ್ತು. ಆದರೆ, ಆ ಹೊತ್ತಿನಲ್ಲಿ ಕೇಂದ್ರದ ಸಹಾಯ ಬಾರದಿದ್ದರಿಂದ ಹಾಲಿ ಹೆಕ್ಟೇರಿಗೆ 12 ಸಾವಿರ ಪರಿಹಾರ ನೀಡಲಾಗುತ್ತಿದೆ. ಆದರೆ, ಈಗ ಕೇಂದ್ರ ಸರ್ಕಾರ 160 ಕೋಟಿ ಹಣ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಎಕರೆವಾರು ಹಂಚಲಾಗುವುದು ಎಂದ ಅವರು, ಪರಿಹಾರಧನದ ಚೆಕ್ ವಿತರಿಸಲು ವಿಳಂಬ ಮಾಡುತ್ತಿರುವ ಗ್ರಾಮ ಲೆಕ್ಕಿಗರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸರ್ಕಾರದ ಸಹಾಯಧನ: ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಮಾತನಾಡಿ, ಕಷ್ಟ ಕಾಲದಲ್ಲಿ ನೆರವಾದವರನ್ನು ಸ್ಮರಿಸುವುದು, ಗೌರವಿಸುವುದು ನಮ್ಮ ಕರ್ತವ್ಯ. ಸರ್ಕಾರ ಕೊಳೆ ರೋಗ ಪರಿಹಾರ ನೀಡುವಲ್ಲಿ ಕಾಗೋಡು ಬಹಳಷ್ಟು ಶ್ರಮಿಸಿದ್ದಾರೆ. ಅವರ ಪ್ರಯತ್ನದ ಫಲವಾಗಿ ಬೆಳೆಗಾರರಿಗೆ ಇದೇ ಮೊದಲ ಬಾರಿಗೆ ಸರ್ಕಾರದ ಸಹಾಯಧನ ದೊರೆಯುತ್ತಿದೆ ಎಂದು ಹೇಳಿದರು.
ಸರ್ಕಾದ ಮಟ್ಟದಲ್ಲಿ ಅಡಕೆ ಬೆಳೆಗಾರರು ಶ್ರೀಮಂತರು ಎನ್ನುವ ಭಾವನೆ ಇದೆ. ಆದರೆ, ಮಲೆನಾಡಿನ ಬಹುತೇಕ ಅಡಕೆ ಬೆಳೆಗಾರರು ಸಣ್ಣ, ಅತಿ ಸಣ್ಣ ಹಿಡುವಳಿದಾರರಾಗಿದ್ದು, ಅಡಕೆಯನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ. ಹಾಗಾಗಿ ಅಡಕೆ ಬೆಳೆಯ ಮೇಲಿನ ಸಣ್ಣ- ಪುಟ್ಟ ಸಂಗತಿಗಳು ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಡಕೆ ಇಡೀ ಸಮುದಾಯದ ಬೆಳೆಯೇ ಹೊರತು ಒಂದು ವರ್ಗದ ಬೆಳೆ ಅಲ್ಲ ಎಂದು ಹೇಳಿದರು.
ಪ್ರಯತ್ನ: ಪ್ರಾಸ್ತಾವಿಕವಾಗಿ ಮಾತನಾಡಿದ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್, ಕಾಗೋಡು ತಿಮ್ಮಪ್ಪ ಅವರ ಪ್ರಯತ್ನದಿಂದಾಗಿ ಸರ್ಕಾರ ಕೊಳೆ ರೋಗಕ್ಕೆ ಪರಿಹಾರ ನೀಡಲು ಮುಂದಾಗಿದೆ.
ಈ ಪ್ರಕಾರ ತಾಲೂಕಿಗೆ 1.52 ಲಕ್ಷ ಬಂದಿದೆ. ನಷ್ಟಕ್ಕೆ ಹೋಲಿಸಿದರೆ ಈಗ ಕೊಟ್ಟಿರುವ ಪರಿಹಾರ ಸ್ವಲ್ಪ ಎಂದೆನಿಸಿದರೂ ಈ ಹಿಂದೆ ಕೊಳೆ ರೋಗದಿಂದ ಬೆಳೆ ಕಳೆದುಕೊಂಡವರಿಗೆ ಸರ್ಕಾರ ಸ್ವಲ್ಪವೂ ಪರಿಹಾರ ನೀಡಿರಲಿಲ್ಲ. 2002ರಲ್ಲಿ ಅಡಕೆ ಧಾರಣೆ ತೀವ್ರ ಕುಸಿದಾಗಲೂ ಕಾಗೋಡು ತಿಮ್ಮಪ್ಪ ಅವರು ಪ್ರಯತ್ನ ಮಾಡಿ ಸರ್ಕಾರದಿಂದ ಬೆಂಬಲ ಬೆಲೆ ಕೊಡಿಸಿದ್ದರು ಎಂದು ನೆನಪಿಸಿಕೊಂಡರು.
ಸಹಕಾರಿ ಪ್ರಮುಖರಾದ ಈಳಿ ನಾರಾಯಣಪ್ಪ, ಬರದವಳ್ಳಿ ಚನ್ನಬಸಪ್ಪ, ಬಿ.ಎನ್. ಸುಬ್ರಾವ್, ಕೆ.ಎಸ್. ಸುಬ್ರಾವ್, ಯು.ಎಚ್. ರಾಮಪ್ಪ, ಎಲ್.ಟಿ. ತಿಮ್ಮಪ್ಪ, ಮಂಜಪ್ಪ ಹಾಜರಿದ್ದರು. ವಿನಾಯಕರಾವ್ ಸ್ವಾಗತಿಸಿದರು. ಎಂ.ಕೆ. ತಿಮ್ಮಪ್ಪ ವಂದಿಸಿದರು. ವ.ಶಂ. ರಾಮಚಂದ್ರ ಭಟ್ ನಿರೂಪಿಸಿದರು.