ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ

Vishwanath S
Updated On : 24 Nov 2013, 3:06 am

ಶಿವಮೊಗ್ಗ: ಕ್ರೀಡಾ ಕ್ಷೇತ್ರದಲ್ಲಿ ರಾಜಕಾರಣಕ್ಕೆ ಅವಕಾಶವಿಲ್ಲದಂತೆ ಅರ್ಹ ಕ್ರೀಡಾಪಟುಗಳು ಎತ್ತರೆತ್ತರಕ್ಕೆ ಬೆಳೆದು ಕೀರ್ತಿ ಪಡೆಯಲು ತೀರ್ಪುಗಾರರು ಹಂಸಕ್ಷೀರ ನ್ಯಾಯದಂತೆ ಸೂಕ್ತ ಹಾಗೂ ಸಕಾಲಿಕ ನಿರ್ಣಯ ಕೈಗೊಳ್ಳುವಂತೆ ಸಂಸದ ಬಿ.ವೈ. ರಾಘವೇಂದ್ರ ತೀರ್ಪುಗಾರರಿಗೆ ಸಲಹೆ ನೀಡಿದರು.
ಭಾರತೀಯ ಕ್ರೀಡಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ, ಬ್ಯಾಡ್ಮಿಂಟನ್ ಸಂಸ್ಥೆ, ವಾಲಿಬಾಲ್ ಸಂಸ್ಥೆ ಮತ್ತು ಟ್ವೆಕಾಂಡೊ ಸಂಸ್ಥೆಗಳ ಆಶ್ರಯದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರದಿಂದ ನವೆಂಬರ್ 24ರವರೆಗೆ ನಡೆಯಲಿರುವ ರಾಜ್ಯಮಟ್ಟದ ಪಂಚಾಯಿತಿ ಯುವ ಕ್ರೀಡಾ ಔರ್ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಕ್ರೀಡಾ ಚಟುವಟಿಕೆಗಳು ಯಾವುದೇ ಕ್ಷೇತ್ರದ ಸಾಧನೆಗೆ ಉತ್ತಮ ತಳಹದಿಯಾಗಿವೆ. ವ್ಯಕ್ತಿ ತನ್ನ ಜೀವನದಲ್ಲಿ ಉತ್ತಮ ಹಂತ ತಲುಪಲು ಕ್ರೀಡೆ ಸಹಾಯಕವಾಗಿದೆ ಎಂದರು.
ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಸಹಜವಾಗಿ ಮಾನಸಿಕ ಮತ್ತು ದೈಹಿಕ ವಿಕಾಸವಾಗಲಿದೆ. ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ. ಕ್ರೀಡೆಯಲ್ಲಿ ಅಸಾಧಾರಣ ಸಾಧನೆ ಮಾಡಿದಾಗ ಯಶಸ್ಸು ಕೂಡ ತಮ್ಮನ್ನು ಹಿಂಬಾಲಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ದೇಶದ ಅತ್ಯುತ್ತಮ ಪ್ರಶಸ್ತಿ ಭಾರತ ರತ್ನಕ್ಕೆ ಭಾಜನರಾದ ಸಚಿನ್ ತೆಂಡೂಲ್ಕರ್‌ರಂತೆ ಕ್ರೀಡಾ ಕ್ಷೇತ್ರದಲ್ಲಿ ಇಲ್ಲಿನ ಪ್ರತಿಭೆಗಳು ಹೊರಹೊಮ್ಮಬೇಕು ಎಂದರು.
ಈ ಕ್ರೀಡಾಕೂಟದಲ್ಲಿ ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಿದ್ದ 32 ತಂಡಗಳ 2,400ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಪಂ ಉಪಾಧ್ಯಕ್ಷೆ ಹೇಮಾಪಾವನಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯಿತ್ರಿ ಷಣ್ಮುಖಪ್ಪ, ನಗರಸಭಾ ಸದಸ್ಯ ಗೋಪಾಲಕೃಷ್ಣ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement