ವಿಳಂಬ ಆಡಳಿತ ಯಂತ್ರಕ್ಕೆ ಶಾಪವಿದ್ದಂತೆ
ಸಾಗರ: ಆಡಳಿತ ಯಂತ್ರಕ್ಕೆ ವಿಳಂಬ ಎನ್ನುವುದು ಶಾಪವಿದ್ದಂತೆ. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಕಾಲಮಿತಿಯೊಳಗೆ ಫಲಾನುಭವಿಗಳಿಗೆ ಮುಟ್ಟಿಸಿದರೆ ಮಾತ್ರ ಆಡಳಿತ ಯಂತ್ರದ ಬಗ್ಗೆ ಜನರಿಗೆ ನಂಬಿಕೆ ಬರುತ್ತದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿ, ನಮ್ಮಲ್ಲಿ ಸೌಲಭ್ಯ ಸಿಕ್ಕರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮನಸ್ಥಿತಿ ಜಾಗೃತವಾಗುತ್ತಿಲ್ಲ. ಇದರ ಜೊತೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ. ಸವಲತ್ತುಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿವರ್ಗ ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು ಎಂದು ಸಲಹೆ ಮಾಡಿದರು.
ಉದ್ದೇಶ ಸಫಲ: ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಇದು ಅರ್ಹರಿಗೆ ತಲುಪಿದಾಗ ಮಾತ್ರ ಸರ್ಕಾರದ ಉದ್ದೇಶ ಸಫಲವಾಗುತ್ತದೆ ಎಂದ ಅವರು, ತಾಲೂಕಿನಲ್ಲಿ ಕಳೆದ 10 ವರ್ಷದಿಂದ ಒಬ್ಬರಿಗೂ ಬಗರ್‌ಹುಕುಂ ಹಕ್ಕುಪತ್ರ ನೀಡಿಲ್ಲ. ಈಗಾಗಲೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಾಗರ ಹಾಗೂ ಹೊಸನಗರ ಕ್ಷೇತ್ರದಲ್ಲಿ ಬಗರ್‌ಹುಕುಂ ಸಮಿತಿ ರಚನೆ ಮಾಡಿದ್ದು, ಪ್ರಥಮವಾಗಿ 10 ಜನರಿಗೆ ಬಗರ್‌ಹುಕುಂ ಸಕ್ರಮ ಸಾಗುವಳಿ ಪತ್ರ ನೀಡಲಾಗುತ್ತಿದೆ.
ಹಿಂದಿನ ಸರ್ಕಾರ ಕಾನು ಹಾಗೂ ಸೊಪ್ಪಿನಬೆಟ್ಟದಲ್ಲಿ ನಿವೇಶನ ನೀಡಲು ಬರುವುದಿಲ್ಲ ಎನ್ನುವ ಕಾನೂನು ಜಾರಿಗೆ ತಂದಿದ್ದು, ಅದನ್ನು ತಿದ್ದುಪಡಿ ಮಾಡಿ, ಅರ್ಹರಿಗೆ ಜಮೀನು ನೀಡುವಂತೆ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಸಾಗುವಳಿ ಚೀಟಿ: ತಾಪಂ ಅಧ್ಯಕ್ಷ ಹರೀಶ್ ಗಂಟೆ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಪಡೆದವರು ಮಾಹಿತಿ ಇಲ್ಲದವರಿಗೆ ಯೋಜನೆ ಕುರಿತು ಮಾಹಿತಿ ನೀಡಿ, ಅವರು ಉಪಯೋಗ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ತಾಲೂಕಿನಲ್ಲಿ 10 ವರ್ಷದ ನಂತರ ಬಗರ್‌ಹುಕುಂ ಸಾಗುವಳಿ ಚೀಟಿ ನೀಡುತ್ತಿರುವುದರ ಹಿಂದೆ ಕಾಗೋಡು ತಿಮ್ಮಪ್ಪ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇದೆ. ಇದರ ಜೊತೆಗೆ ಬೆಳೆ ಪರಿಹಾರವನ್ನು ಶೀಘ್ರವಾಗಿ ರೈತರಿಗೆ ತಲುಪಿಸುವಲ್ಲಿ ವಿಧಾನಸಭಾಧ್ಯಕ್ಷರು ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂದು ಹೇಳಿದರು.
ತಾಪಂ ಉಪಾಧ್ಯಕ್ಷೆ ಗೌರಮ್ಮ, ಜಿಪಂ ಸದಸ್ಯರಾದ ಸುಮಂಗಲ ರಾಮಕೃಷ್ಣ, ಲಲಿತಾ ನಾರಾಯಣ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ, ತಹಸೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ, ನಗರಸಭೆ ಪ್ರಭಾರಿ ಪೌರಾಯುಕ್ತ ಪೂವಯ್ಯ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿದ್ದಪ್ಪ ಹಾಜರಿದ್ದರು.