ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

2 ಲೀಟರ್ ಪೆಟ್ರೋಲ್‌ಗೆ 500!

Lingaraj Badiger
Updated On : 25 Nov 2013, 10:51 am

ಕ.ಪ್ರ.ವಾರ್ತೆ, ಶಿವಮೊಗ್ಗ, ನ. 24
ನಗರದ ಪೆಟ್ರೋಲ್ ಬಂಕ್‌ನಲ್ಲಿ ಶನಿವಾರ ನೀರು ಮಿಶ್ರಿತ ಡೀಸೆಲ್ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಪ್ರತಿಭಟನೆ ನಡೆಸಿ 24 ಗಂಟೆ ಕಳೆದಿಲ್ಲ, ಅದೇ ರೀತಿಯ ಮತ್ತೊಂದು ವಂಚನೆ ಪ್ರಕರಣವೊಂದು ಭಾನುವಾರ ನಗರದಲ್ಲಿ ಬೆಳಕಿಗೆ ಬಂದು ಸಾರ್ವಜನಿಕರು ತೀವ್ರ ರೀತಿಯಲ್ಲಿ ಪ್ರತಿಭಟಿಸಿದ ಪ್ರಸಂಗ ನಡೆಯಿತು.
ಬಿ.ಎಚ್. ರಸ್ತೆಯ ಹೊಳೆ ಬಸ್ ನಿಲ್ದಾಣದ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ಹೊನ್ನಾಳಿಯ ಎಚ್. ರಾಜು ಎಂಬುವವರು ತಮ್ಮ ಬೈಕ್‌ಗೆ 500 ಪೆಟ್ರೋಲ್ ಹಾಕಿಸಿದ್ದಾರೆ. ಕೆಲವೇ ಕ್ಷಣದಲ್ಲಿ ಅನುಮಾನಗೊಂಡ ರಾಜು ಆ ಕಾರ್ಮಿಕನನ್ನು ಕರೆದು ನೀನು ಎಷ್ಟು ರುಪಾಯಿ ಪೆಟ್ರೋಲ್ ಹಾಕಿದೆ ಎಂದು ಪ್ರಶ್ನಿಸಿದ್ದಾರೆ. ಆತನಿಂದ ಯಾವುದೇ ಸಮರ್ಪಕ ಉತ್ತರ ದೊರೆತಿಲ್ಲ. ನಂತರ ಬಂಕ್‌ನಲ್ಲಿದ್ದ ಕ್ಯಾನ್ ತಂದು ರಾಜು ಬೈಕ್‌ನಿಂದ ಪೆಟ್ರೋಲ್ ತೆಗೆದಿದ್ದಾರೆ. ಬೈಕ್‌ನಲ್ಲಿ ಮೊದಲೇ ಇದ್ದಂತಹ ಅರ್ಧ ಲೀಟರ್ ಪೆಟ್ರೋಲ್ ಸೇರಿ 2.3 ಲೀ. ಪೆಟ್ರೋಲನ್ನು ಬೈಕ್‌ನಿಂದ ತೆಗೆದಿದ್ದು, ಇದನ್ನು ಪ್ರಶ್ನಿಸಿದಾಗ ಹುಡುಗ ಓಡಿಹೋಗಿದ್ದಾನೆ. ಆ ವೇಳೆ ಗ್ರಾಹಕರೆಲ್ಲರೂ ಒಟ್ಟಾಗಿ ಪೆಟ್ರೋಲ್ ಬಂಕ್ ವ್ಯವಸ್ಥಾಪಕರು ಹಾಗೂ ಕೆಲಸಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಂಕ್‌ನಲ್ಲಿ ಉದ್ವಿಗ್ನ ಸ್ಥಿತಿ: ಕೆಲ ಸಮಯ ಬಂಕ್‌ನಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಗ್ರಾಹಕರ ಒತ್ತಾಯ ಮೇರೆಗೆ ಬಂಕ್ ಮಾಲೀಕರನ್ನು ಕರೆಸಲಾಯಿತಾದರೂ ಅವರಿಂದಲೂ ಸಮರ್ಪಕವಾಗಿ ಉತ್ತರ ದೊರೆಯಲಿಲ್ಲ. ಈ ಸಂದರ್ಭದಲ್ಲಿ ಕೆಲ ಗ್ರಾಹಕರು ಆಕ್ರೋಶಗೊಂಡು ಮಾಲೀಕರ ವಿರುದ್ಧ ಗಲಾಟೆ ಮಾಡಲಾರಂಭಿಸಿದರು. ಅಲ್ಲದೇ ಓಡಿ ಹೋಗಿರುವ ಹುಡುಗನ್ನು ಕರೆಸುವಂತೆ ಒತ್ತಾಯ ಮಾಡಿದರು. ಹುಡುಗನ ಫೋನ್ ಸ್ವೀಚ್ ಆಫ್ ಆಗಿದೆ ಎಂದು ಮಾಲೀಕರು ಸಬೂಬು ನೀಡಿದರು. ಮತ್ತಷ್ಟು ಆಕ್ರೋಶಗೊಂಡ ಗ್ರಾಹಕರು ಪೆಟ್ರೋಲ್ ಬಂಕ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾದರು.
ಮಾತಿನ ಚಕಮಕಿ ನಡೆಯಿತು. ಕೆಲಹೊತ್ತು ಪೆಟ್ರೋಲ್ ಹಾಕುವ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಲಾಯಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿ, ಬಂಕ್ ಮಾಲೀಕ ಹಾಗೂ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರನ್ನು ಕರೆಕೊಂಡು ಠಾಣೆ ಹೋಗಿ ವಿಚಾರಣೆ ನಡೆಸಿದರು. ನಂತರ ಬಂಕ್ ಮಾಲೀಕರು ಹುಡುಗರಿಂದ ತಪ್ಪಾಗಿದ್ದು, ರಾಜು ಅವರಿಗೆ 500 ಪೆಟ್ರೋಲ್ ಹಾಕುವುದಾಗಿ ತಿಳಿಸಿದರು. ಕೋಟೆ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement