8.53 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
ಕ.ಪ್ರ.ವಾರ್ತೆ, ಭದ್ರಾವತಿ, ನ. 24
ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ರಾಜೀವ್ ಗಾಂಧಿ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಯಡಿ 8.53 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಂ.ಜೆ. ಅಪ್ಪಾಜಿ ಯಂತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ಯೋಜನೆಯಡಿ ಕುಡಿಯುವ ನೀರಿನ ಸ್ಥಾವರ ಸ್ಥಾಪಿಸಿ ಕೂಡ್ಲಿಗೆರೆಯ ಹಿರೇಕೆರೆಯಿಂದ ಕೂಡ್ಲಿಗೆರೆ, ನಾಗತಿಬೆಳಗಲು, ಕಾಗೆಕೋಡಮಗ್ಗೆ, ಅತ್ತಿಗುಂದ ಹಾಗೂ ಅರಳಿಹಳ್ಳಿ ಗ್ರಾ.ಪಂ. ವ್ಯಾಪ್ತಿಗಳ ಸುಮಾರು 18 ಗ್ರಾಮಗಳಿಗೆ ನೀರನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಈ ಕಾಮಗಾರಿಗೆ ಒಂದು ವರ್ಷ ಅವಧಿ ನೀಡಲಾಗಿದೆ. ಈ ಅವಧಿಯಲ್ಲಿ ಕಾಮಗಾರಿ ಮುಗಿಸಿ ಜನತೆಗೆ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ. ಸದಸ್ಯೆ ಸುಜಾತ, ತಾ.ಪಂ. ಸದಸ್ಯೆ ಗೌರಮ್ಮ, ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿಬಾಯಿ, ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ. ಮಲ್ಲೇಶಪ್ಪ, ಡಿ.ಎಫ್.ಓ ರಾಜಣ್ಣ, ಜಿ.ಪಂ. ಕಿರಿಯ ಎಂಜಿನಿಯರ್ ಅಲ್ವಿನ್ ಎಸ್. ಕ್ರಾಸ್ಟಾ, ಗುತ್ತಿಗೆದಾರ ಡಿ.ಜಿ. ಮರಳಸಿದ್ದಪ್ಪ, ಪಿಡಿಓ ಸಂತೋಷ್, ಗ್ರಾ.ಪಂ. ಸದಸ್ಯರುಗಳು ಮತ್ತು ಸಾರ್ವಜನಿಕರು ಹಾಜರಿದ್ದರು.