ಆಟೋ ಚಾಲಕರ ತರಬೇತಿಗೆ ಅನುದಾನ ನೀಡಿ
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 24
ನೂತನವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಆಟೋ ಚಾಲಕರ ತರಬೇತಿಗೆ ರಾಜ್ಯ ಸರ್ಕಾರ ತನ್ನ ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.
ವಾಹನ ಚಾಲಕರ ಹಿತರಕ್ಷಣಾ ವೇದಿಕೆ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಾಹನ ಚಾಲಕರು ಎಸ್‌ಎಸ್‌ಎಲ್‌ಸಿ ನೇರ ಪರೀಕ್ಷೆ ಬರೆಯಲು ಅನುಕೂಲವಾಗುವ ಪಠ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು, ಎಸ್‌ಎಸ್‌ಎಲ್‌ಸಿ ನೇರ ಪರೀಕ್ಷೆ ತೆಗೆದುಕೊಂಡವರಿಗೆ ಫಲಿತಾಂಶಕ್ಕಾಗಿ ಪ್ರಯತ್ನ ಪಡಲು ಇನ್ನು ಮೂರು ತಿಂಗಳ ಕಾಲಾವಕಾಶವಿದ್ದು, ಕಠಿಣ ಅಭ್ಯಾಸ ನಡೆಸಿದರೆ ಉತ್ತೀರ್ಣರಾಗಬಹುದು ಎಂದು ಚಾಲಕರಿಗೆ ಸಲಹೆ ನೀಡಿದರು.
ಸಚಿವರ ಸ್ಪಂದನೆ: ಆಟೋ ಚಾಲಕರು ಕೂಡ ಸಾಕಷ್ಟು ಉತ್ಸಾಹದಿಂದ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಟೋ ಚಾಲಕರಿಗೆ ಅಗತ್ಯವಾಗುವ ಪೂರಕ ಪಠ್ಯ ಸಾಮಗ್ರಿ ಹಾಗೂ ತರಬೇತಿಗಾಗಿ ಸುಮಾರು 10 ಲಕ್ಷ ಅಗತ್ಯ ಬೀಳಲಿದೆ. ಇದನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಗಮನಕ್ಕೂ ತರಲಾಗಿದೆ. ಅವರು ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ, 21ನೇ ಶತಮಾನ ಬಹಳಷ್ಟು ಬೆಳೆದಿದೆ. ವೈಜ್ಞಾನಿಕ ಯುಗವಾಗಿದೆ. ಇಂತಹ ಸಮಯದಲ್ಲಿ ಹತ್ತನೇ ತರಗತಿ ಪೂರೈಸಿದ್ದರೆ ಹೆಚ್ಚು ಅನುಕೂಲವಾಗುತ್ತದೆ. ರಾಜ್ಯದಲ್ಲಿಯೇ ಎಲ್ಲೂ ಇಲ್ಲದ ಸಾಮಾಜಿಕ ಬದಲಾವಣೆಯನ್ನು ಈ ಮೂಲಕ ಕಾಣಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆಟೋ ಚಾಲಕರಿಗೂ ಪುಸ್ತಕ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಾಹನ ಚಾಲಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಿ. ರಾಜಶೇಖರಪ್ಪ, ನಗರಸಭಾ ಸದಸ್ಯ ಐಡಿಯಲ್ ಗೋಪಿ, ಬಳ್ಳಕೆರೆ ಸಂತೋಷ್ ಮತ್ತಿತರರು ಇದ್ದರು.