ಕನ್ನಡ ಕಡ್ಡಾಯಕ್ಕೆ ಶ್ರಮಿಸಿ
ಭದ್ರಾವತಿ: ರಾಜ್ಯದಲ್ಲಿ ಕನ್ನಡ ಕಡ್ಡಾಯವಾಗಿ ಕಲಿಯಬೇಕೆಂಬ ವಾತಾವರಣ ಸೃಷ್ಟಿ ಮಾಡುವ ಜವಾಬ್ದಾರಿಯನ್ನು ಕನ್ನಡಿಗರು ಹೊರಬೇಕೆಂದು ಸಾಗರದ ಉಪನ್ಯಾಸಕ ಮತ್ತು ಸಾಹಿತಿ ಸಫ್ರಾಜ್ ಚಂದ್ರಗುತ್ತಿ ಅಭಿಪ್ರಾಯಪಟ್ಟರು. ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಮತ್ತು ಲಯನ್ಸ್ ಕ್ಲಬ್ಗಳ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮನೆ- ಮನಗಳಿಗೆ ಸಾಹಿತ್ಯ ಕಾರ್ಯಕ್ರಮದ 19ನೇ ಮಾಲಿಕೆ, ಕನ್ನಡ ರಾಜ್ಯೋತ್ಸವ ಮತ್ತು ಗೀತ ಚೇತನ ಗೀತ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರಸಭಾ ಸದಸ್ಯ ನರಸಿಂಹನ್ ಮಾತನಾಡಿ, ಕನ್ನಡಿಗರ ಹೃದಯ ವೈಶಾಲ್ಯ ಕೊಂಡಾಡಿದರು. ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಎಲ್. ದೇವರಾಜ್ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್. ತಿಮ್ಮಪ್ಪ ಸ್ವಾಗತಿಸಿದರು. ಎಚ್. ಭುವನೇಶ್ವರ್ ನಿರೂಪಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿ.ಕೆ. ಮಂಜುನಾಥ್ ವಂದಿಸಿದರು.
ಅನ್ನಭಾಗ್ಯದ 30 ಚೀಲ ಅಕ್ಕಿ ವಶ
ಶಿವಮೊಗ್ಗ: ಲಾರಿಯಲ್ಲಿ ಸಾಗಾಣೆ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ನಗರದ ಮಲ್ಲಿಕಾರ್ಜುನ ರೈಸ್ ಮಿಲ್ ಬಳಿ ನಡೆದಿದೆ. ಜಗದೀಶ್ ಹಾಗೂ ಇತರೆ ಇಬ್ಬರು ಈ ಅಕ್ಕಿ ಸಾಗಾಣೆ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ಲಾರಿ ಸಮೇತ 30 ಚೀಲ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಕೋಟೆ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಬೈಕ್ ಸವಾರ ಸಾವು
ಶಿವಮೊಗ್ಗ: ರಸ್ತೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕುಂಸಿಯ ಕೋಣೆ ಹೊಸೂರು ಗ್ರಾಮದ ಸಮೀಪ ನಡೆದಿದೆ. ಶಿವಮೊಗ್ಗ ನಗರದ ನಿವಾಸಿ, ಡಿಪ್ಲೋಮಾ ವಿದ್ಯಾರ್ಥಿ ಹರೀಶ್ (22)ಮೃತಪಟ್ಟ ಬೈಕ್ ಸವಾರ. ಎದುರುಗಡೆಯಿಂದ ಬಂದ ವಾಹನದ ಪ್ರಖರ ಹೆಡ್ಲೈಡ್ ಬೆಳಕಿನಿಂದ ರಸ್ತೆ ತಿರುವು ಇರುವುದು ಗೊತ್ತಾಗದೆ ರಸ್ತೆ ಬದಿಯ ಚರಂಡಿಗೆ ಬೈಕ್ ಡಿಕ್ಕಿ ಹೊಡೆಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ಪ್ರಕರಣ ಕುಂಸಿ ಠಾಣೆಯಲ್ಲಿ ದಾಖಲಾಗಿದೆ.