ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕರಿಮನೆ ಗ್ರಾಮಸ್ಥರಿಗೆ ಸಚಿವರ ಅಭಯ

Lingaraj Badiger
Updated On : 25 Nov 2013, 10:44 am

ಕ.ಪ್ರ. ವಾರ್ತೆ, ಹೊಸನಗರ, ನ.24
ಪ್ರಪೋಶಲ್ ಫಾರೆಸ್ಟ್ ಆಗಿ ಪರಿವರ್ತನೆಯಾಗಿ ಮನೆ ಜಮೀನು ಕಳೆದು ಕೊಳ್ಳುವ ಭೀತಿಯಿಂದ ತತ್ತರಿಸಿ ಹೋಗಿದ್ದ ತಾಲೂಕಿನ ಕರಿಮನೆ(ನಿಲ್ಸ್‌ಕಲ್) ಗ್ರಾಮಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅಭಯ ನೀಡಿದ್ದಾರೆ.
ಇಡೀ ಕರಿಮನೆ ಗ್ರಾಮದ ಆರ್.ಟಿ.ಸಿಗಳಲ್ಲಿ ಪಿಎಫ್ ಎಂದು ದಾಖಲಾಗಿದ್ದು, ಉದ್ಭವಿಸಿದ ಸಮಸ್ಯೆ ಬಗ್ಗೆ ಸಮೀಪದ ಮಾಸ್ತಿಕಟ್ಟೆ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಸಚಿವರು ಪ್ರಕರಣದ ಸಂಬಂಧ ಸಾಗರ ಉಪವಿಭಾಗಾಧಿಕಾರಿ ಉದಯಕುಮಾರಶೆಟ್ಟಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸೂಚಿತ ಅರಣ್ಯ ಮತ್ತು ದನದ ಮುಫತ್ತು ದಾಖಲಿನ ವ್ಯತ್ಯಾಸ ಜೊತೆಗೆ ಕರಿಮನೆ ಗ್ರಾಮಸ್ಥರ ಆತಂಕಕ್ಕೆ ಕಾರಣದ ಅಂಶಗಳನ್ನು ಗ್ರಾಮಸ್ಥರ ಪರವಾಗಿ ಎಪಿಎಂಸಿ ಸದಸ್ಯ ಸಿ. ರಾಮಚಂದ್ರರಾವ್ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಂಟಾಗಿರುವ ಭವಿಷ್ಯದ ಆತಂಕದ ಬಗ್ಗೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಸಮಿತಿ ರಚನೆ: ಗ್ರಾಮದ ಸ್ಥಿತಿಗತಿ ಮತ್ತು ಸಮಸ್ಯೆ ಬಗ್ಗೆ ಸ್ಥೂಲ ಚಿತ್ರಣವಿರುವ ಮನವಿ ತಯಾರಿಸಿ ನೀಡಲು ರಾಮಚಂದ್ರ ನಿಯೋಗಕ್ಕೆ ಸೂಚಿಸಿದ ಸಚಿವರು, ಇಲಾಖೆಯಲ್ಲಿ ಅಂಶ ಮತ್ತು ಸಮಸ್ಯೆ ಪರಿಹಾರ ಸಂಬಂಧ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ಕ್ಷೇತ್ರದಲ್ಲಿ ಇಂತಹ ಸಮಸ್ಯೆ ಸಾಕಷ್ಟಿದೆ. ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್‌ರೊಂದಿಗೆ ಚರ್ಚಿಸಿ ಫಾರೆಸ್ಟ್ ಸೆಟಲ್‌ಮೆಂಟ್ ಕಮಿಟಿ ರಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕರಿಮನೆ ಗ್ರಾಮದಲ್ಲಿ ಉಂಟಾಗಿರುವ ದಾಖಲೆ ವ್ಯತ್ಯಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರಲ್ಲದೆ. ಸಮಸ್ಯೆ ಇತ್ಯರ್ಥವಾಗುವವರೆಗೆ ಆ ಸ್ಥಳದಲ್ಲಿ ಯಾವುದೆ ಕ್ರಮಗೊಳ್ಳದಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ತಾಕೀತು ಮಾಡಿದರು. ಒಂದು ವೇಳೆ ಅರಣ್ಯ ಇಲಾಖೆಗೆ ಅಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಉಂಟಾದರೆ ನನ್ನ ಗಮನಕ್ಕೆ ತನ್ನಿ ಎಂದು ಸೂಚಿಸಿದರು.
ಎಸಿಎಫ್, ಆಲ್ವಿನ್, ಆರ್‌ಎಫ್‌ಒ ಮೃತ್ಯುಂಜಯಪ್ಪ, ಪ್ರಮುಖರಾದ ಡಾ. ಸುಂದರೇಶ್, ಜಿ.ಎಸ್. ನಾರಾಯಯಣರಾವ್, ಹಾಲಗದ್ದೆ ಉಮೇಶ್,  ಗೋಪಾಲ್, ಸಾದಗಲ್ ಅಂಬರೀಷ್, ರಾಜಶೇಖರ್, ಬೆಳ್ಳೂರು ತಿಮ್ಮಪ್ಪ, ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement