ಕರೂರು ಬಳಿ ಅಪಘಾತ: ಇಬ್ಬರಿಗೆ ಗಾಯ
ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಹಾಗೂ ಖಜಾಂಚಿ ಅಶ್ವತ್ಥನಾರಾಯಣ ಪ್ರಯಾಣಿಸುತ್ತಿದ್ದ ಕಾರು ರಸ್ತೆ ಅಪಘಾತಕ್ಕೊಳಗಾದ ಘಟನೆ ತಮಿಳುನಾಡಿನ ಕರೂರು ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.
ಖಾಸಗಿ ಕಾರ್ಯಕ್ರಮ ನಿಮಿತ್ತ ತಮಿಳುನಾಡಿಗೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸು ಬರುವಾಗ ಎದುರುಗಡೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ತಮಿಳುನಾಡಿನ ಕರೂರು ಬಳಿ ಇರುವ ಕುರಚಿ ಬೈಪಾಸ್ ಬಳಿ ಅಪಘಾತ ಸಂಭವಿಸಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಎಸ್.ವಿ. ತಿಮ್ಮಯ್ಯ ಅವರ ಕಾಲುಗಳಿಗೆ ಪೆಟ್ಟುಬಿದ್ದಿದೆ. ಅಶ್ವತ್ಥನಾರಾಯಣಶೆಟ್ಟಿ ಅವರ ಬೆನ್ನಿಗೆ ತೀವ್ರವಾಗಿ ಪೆಟ್ಟುಬಿದ್ದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಚಾಲಕ ಚಂದ್ರಪ್ಪ ಎಂಬವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ.
ಈ ಮೂವರನ್ನು ಐಸಿಯುನ ತೀವ್ರ ನಿಗ ಘಟಕದಲ್ಲಿ ಇಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾವುದೇ ಪ್ರಾಣಾಪಾಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ.