ವಂಶಪಾರಂಪರ್ಯ ರಾಜಕಾರಣ ವಿರೋಧಿಸಿ: ಆಯನೂರು
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 24
ರಾಜ ಮನೆತನಗಳ ಆಳ್ವಿಕೆ ವಿರೋಧಿಸಿದ ದೇಶದಲ್ಲಿಂದು ವಂಶಪಾರಂಪರ್ಯ ಆಳ್ವಿಕೆಗಳು ಹೆಚ್ಚಾಗುತ್ತಿದೆ. ಎಲ್ಲ ಪಕ್ಷಗಳಲ್ಲಿಯೂ ಇದು ಸರ್ವೇಸಾಮಾನ್ಯವಾಗಿದ್ದು, ತಂದೆಯ ನಂತರ ಮಕ್ಕಳು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಪ್ರೀತಿಸುವವರು ವಂಶಪಾರಂಪರ್ಯ ಆಳ್ವಿಕೆ ವಿರೋಧಿಸಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಕರೆ ನೀಡಿದರು.
ರೋಟರಿ ಕ್ಲಬ್ ಆಯೋಜಿಸಿದ್ದ ಯುವ ಸಂಸತ್ ಅಧಿವೇಶನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಾಮಾಜಿಕ ಬದ್ಧತೆ, ಕಳಕಳಿ, ಬಡವರ ನೋವು-ದುಮ್ಮಾನ ಅರಿತವನು ನಾಯಕನಾಗಬೇಕು. ಆಗ ಮಾತ್ರ ನೈಜ ಜನಪ್ರತಿನಿಧಿಯಾಗಿ ಹೊರಹೊಮ್ಮಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಸ್ಯೆ ಪರಿಹಾರ ಸಾಧ್ಯವೇ? ಇಂದು ನಾಯಕನಾಗುವುದು ಸುಲಭದ ಕೆಲಸ, ಫ್ಲೆಕ್ಸ್‌ಗಳಲ್ಲಿ ನಾಯಕರು ಹುಟ್ಟುತ್ತಿದ್ದಾರೆ. ಈ ಫ್ಲೆಕ್ಸ್ ನಾಯಕರಿಗೆ ಯಾವುದೇ ಸಾಧನೆಯ ಬೆನ್ನುಲುಬು ಇಲ್ಲ, ಇವರೇ ದುಡ್ಡುಕೊಟ್ಟು ಸನ್ಮಾನ ಮಾಡಿಸಿಕೊಳ್ಳುತ್ತಾರೆ. ಇಂತಹ ಫ್ಲೆಕ್ಸ್ ನಾಯಕರು ಜನತಂತ್ರ ವ್ಯವಸ್ಥೆಗೆ ಮಾರಕವಾಗಿದ್ದಾರೆ. ಫ್ಲೆಕ್ಸ್ ನಾಯಕರಿಂದ ಜನರ ಸಮಸ್ಯೆ ಪರಿಹಾರ ಸಾಧ್ಯವೇ ಎಂದು ಟೀಕಿಸಿದರು.
ಪ್ರಜಾಸತ್ತಾತ್ಮಕ ಸಂಸ್ಥೆಗಳು ಅರ್ಥಪೂರ್ಣವಾಗಿರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯೂ ಕೂಡ ಅಷ್ಟೆ ಪರಿಶುದ್ಧವಾಗಿರಬೇಕು. ಆದರಿಂದು ಹಣ, ಜಾತಿ ಬಲದ ಮೇಲೆ ಚುನಾವಣೆ ಎದುರಿಸಿ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎಂದರೆ ನಮ್ಮ ವ್ಯವಸ್ಥೆ ಎಷ್ಟು ಭ್ರಷ್ಟವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ವಿಷಾದಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗಿಂತ ವ್ಯಕ್ತಿಗತ ಆರೋಪಗಳಿಗೆ ಇಂದು ಹೆಚ್ಚು ಒತ್ತು ಸಿಗುತ್ತಿದೆ. ಇದರಿಂದ ಶಾಸನ ಸಭೆಗಳ ಕಾರ್ಯಕಲಾಪಗಳ ಬಗ್ಗೆ ಸಾರ್ವಜನಿಕರಲ್ಲಿ ನಿರಾಸೆಯ ಭಾವ ಮೂಡುತ್ತಿದೆ ಎಂದು ಹೇಳಿದರು.
ಇಂದು ಶಾಸಕರು ಹಾಗೂ ಸಂಸದರಿಗೆ ಫೆಡರಲ್ ಆಳ್ವಿಕೆ, ಕೇಂದ್ರ- ರಾಜ್ಯ ಸರ್ಕಾರದ ಕರ್ತವ್ಯ, ಶಾಸನ ಸಭೆಗಳ ಕಾರ್ಯಕಲಾಪ ಸೇರಿದಂತೆ ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆಯೂ ಮಾಹಿತಿ ಇಲ್ಲದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.