ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡರೆ ಹೋರಾಟ

Lingaraj Badiger
Updated On : 25 Nov 2013, 10:44 am

ತ್ಯಾಗರ್ತಿ: ಸಾಗರ ತಾಲೂಕಿನ ಮಿಡಿನಗರ ಶಾಲೆ ಮುಖ್ಯೋಪಾಧ್ಯಾಯ ಸತೀಶ್ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳು ಮುಂದಾದರೆ ಬೀದಿಗಿಳಿದು ಹೋರಾಟ ಅನಿವಾರ್ಯ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಗಜೇಂದ್ರಪ್ಪ ಎಚ್ಚರಿಸಿದ್ದಾರೆ.
ಕ್ಷೀರಭಾಗ್ಯ ಹಾಲಿನ ಪುಡಿಗೆ ವಿಷ ಮಿಶ್ರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ತನಿಖೆಗೆ ಬಂದ ಉಪವಿಭಾಗಾಧಿಕಾರಿಗಳು ಶಿಸ್ತುಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಯಾವುದೇ ತಪ್ಪು ಮಾಡದೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಮುಖ್ಯ ಶಿಕ್ಷಕರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಚ್. ಸತೀಶ್ ಶಾಲೆಗೆ ಬರುವಾಗ ಕೇವಲ ಹನ್ನೊಂದು ಮಕ್ಕಳು ದಾಖಲಾಗಿದ್ದು, ನಂತರ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕವಾಗಿ ಹಂತ-ಹಂತವಾಗಿ ಇಪತ್ತೊಂಬತ್ತು ಮಕ್ಕಳು ಇಂದು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಕೊರ್ಲಿಕೊಪ್ಪ, ಮುತ್ತಲಬೈಲು, ತಾಂಡ ಗ್ರಾಮಗಳಿಂದ ಮಕ್ಕಳು ಬರುತ್ತಿದ್ದಾರೆ. ಅಲ್ಲದೇ ಇವರ ಶ್ರಮ ಹಾಗೂ ಗ್ರಾಮಸ್ಥರ ಸಹಕಾರದಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ತಾಂತ್ರಿಕ ಮತ್ತು ವೈಜ್ಞಾನಿಕ ಶಿಕ್ಷಣ ನೀಡಲು ನಗರದ ಮಕ್ಕಳು ಪಡೆಯುತ್ತಿರುವ ಗುಣಾತ್ಮಕ ಶಿಕ್ಷಣವನ್ನು ನೀಡಲು 2013ರಲ್ಲಿ ಸಾಗರ ತಾಪಂ ಸಹಕಾರದೊಂದಿಗೆ ಶಾಲೆಗೆ ಕಂಪ್ಯೂಟರ್ ತರಿಸಿ, ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಇಷ್ಟೆಲ್ಲಾ ಶ್ರಮವಹಿಸಿ ದುಡಿದ ಶಿಕ್ಷಕರನ್ನು ಯಾವುದೋ ಕಿಡಿಗೇಡಿಗಳು ಮಾಡಿದ ಹೀನಕೃತ್ಯಕ್ಕೆ ಹೊಣೆ ಮಾಡುತ್ತಿರುವ ಅಧಿಕಾರಿ ವರ್ಗದ ಮಾತು ಎಷ್ಟರ ಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿದ್ದಾರೆ.
ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಲು ನಾವು ಸಹಕರಿಸುತ್ತೇವೆ, ಆದರೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲು ಮುಂದಾದರೆ, ಹೋರಾಟದ ದಾರಿ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement