ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅರಣ್ಯ, ನದಿಮೂಲ ಅಧ್ಯಯನ ಅಗತ್ಯ

Lingaraj Badiger
Updated On : 26 Nov 2013, 10:40 am

ಕ.ಪ್ರ.ವಾರ್ತೆ, ಶಿವಮೊಗ್ಗ, ನ. 25
ಸ್ಥಳೀಯ ಅರಣ್ಯ ಮತ್ತು ನದಿಮೂಲ ಕುರಿತು ಅಧ್ಯಯನ ಮಾಡುವ ಮೂಲಕ ದಾಖಲೀಕರಣ ಆಗಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಹಾಗೂ ಪಶ್ಚಿಮಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಆಶೀಸರ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದಲ್ಲಿ ಅರಣ್ಯ ಇಲಾಖೆ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪಶ್ಚಿಮಘಟ್ಟದ ಜೀವವೈವಿಧ್ಯ ಮತ್ತು ಪರಿಸರ ಪರಿಸ್ಥಿತಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅರಿವು ಮೂಡಿಸಲು ಸಹಕಾರಿ: ಪರಿಸರ ಹಾನಿಗೆ ಕಾರಣವಾಗುವ ಹಲವು ಯೋಜನೆಗಳು ಜಾರಿಯಾಗುವ ಸಂದರ್ಭದಲ್ಲಿ ಪಕ್ವತೆ ಇರುವ ದಾಖಲೆ ಅಗತ್ಯ. ಇಂತಹ ಸಂದರ್ಭದಲ್ಲಿ ಸಂಬಂಧಿಸಿದವರ ಕಣ್ತೆರೆಸಲು ಹಾಗೂ ನಮ್ಮ ಅಪರೂಪದ ಜೀವವೈಧ್ಯತೆ ಬಗ್ಗೆ ಅರಿವು ಮೂಡಿಸಲು ದಾಖಲೀಕರಣ ಅನುಕೂಲಕ್ಕೆ ಬರಲಿದೆ ಎಂದರು.
ಸ್ಥಳೀಯ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಸಲುವಾಗಿ ಸಂಘಟನೆಗಳು, ಪ್ರಾಧ್ಯಾಪಕರು, ಸಂಶೋಧಕರು, ಸ್ಥಳೀಯ ಅರಣ್ಯ, ದೇವರಕಾಡು, ನದಿಮೂಲಗಳ ಕುರಿತು ಅಧ್ಯಯನ ನಡೆಸಬೇಕು. ಈ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಅರಣ್ಯ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಹಾಗೂ ಕಾನೂನು ಜನಪರವಾಗಿವೆ. ಆದರೆ, ಅರಣ್ಯ ಸಂಪನ್ಮೂಲ ರಕ್ಷಿಸುವುದಕ್ಕೆ ಸ್ವಯಂಪ್ರೇರಿತರಾಗಿ ಜನರು ಮುಂದಾಗಬೇಕು. ಸಂರಕ್ಷಣೆ ಕೆಲವೇ ಹೋರಾಟಗಾರರ ಕೆಲಸವಲ್ಲ. ವಿವಿಗಳು ಸ್ಥಳೀಯ ಹಂತದಲ್ಲಿ ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆಯಂತಹ ವಿಷಯಗಳನ್ನಾಧರಿಸಿ ಸಂಶೋಧನೆಗೆ ತೊಡಗಿಸುವುದರ ಮೂಲಕ ಅಮೂಲ್ಯ ಅರಣ್ಯ ಸಂಪತ್ತನ್ನು ದಾಖಲಿಸಬೇಕು ಎಂದರು.
ಅಭ್ಯಾಸ ಅಗತ್ಯ: ಕಾನುಗಳ ಬಗ್ಗೆ ತೀರ್ಥಹಳ್ಳಿ ಪ್ರದೇಶದಲ್ಲಿ ಸಾಕಷ್ಟು ಬೆಳಕು ಚೆಲ್ಲಲಾಗಿದೆ. ಖಂಡಿತವಾಗಿ ಮತ್ತಷ್ಟು ಅಭ್ಯಾಸ ಆಗಬೇಕಾಗಿದೆ ಎಂದ ಅವರು, ರಾಂಪತ್ರ ಜಡ್ಡಿಗಳ ಅಧ್ಯಯನಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶವಿದೆ ಎಂದು ಹೇಳಿದರು.
ಶರಾವತಿ, ತುಂಗಾ, ಭದ್ರಾ, ಮಾಲತಿ, ವರದಾ, ಕುಮದ್ವತಿ ಇನ್ನಿತರ ಉಪನದಿಗಳ ಮೂಲಗಳ ಸಮೀಕ್ಷೆಗೆ ಇನ್ನಷ್ಟು ಅವಕಾಶ ಹೆಚ್ಚಾಗಿದೆ. ಅದೇ ರೀತಿ ಚಿಕ್ಕಮಗಳೂರು- ಶಿವಮೊಗ್ಗ ಜಿಲ್ಲೆಗಳ ಅರಣ್ಯ ಪರಿಸರ ಪರಿಸ್ಥಿತಿ ಬಗ್ಗೆ ಅಧ್ಯಯನಗಳು ಬೆಳಕು ಚೆಲ್ಲಿದ ಹಲವಾರು ಅಂಶಗಳಿವೆ. ವಿವರವಾದ ಅಧ್ಯಯನ ಅವಶ್ಯಕತೆ ಬಹಳ ಇದೆ ಎಂದು ತಿಳಿಸಿದರು.
ಐಐಎಸ್ಸಿ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ದಿಕ್ಸೂಚಿ ಭಾಷಣ ಮಾಡಿದರು. ಕುವೆಂಪು ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಟಿ.ವಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ರಾಜಾನಾಯಕ ಹಾಗೂ ಪರಿಸರ ವಿಜ್ಞಾನ ವಿಭಾಗದ ಡಾ.ಜೆ. ನಾರಾಯಣ ಉಪಸ್ಥಿತರಿದ್ದರು.
ಡಾ. ವೈ.ಎಲ್. ಕೃಷ್ಣಮೂರ್ತಿ ಸ್ವಾಗತಿಸಿ, ವೃಕ್ಷಲಕ್ಷ ಆಂದೋಲನದ ಕಾರ್ಯದರ್ಶಿ ಬಿ.ಎಚ್. ರಾಘವೇಂದ್ರ ವಂದಿಸಿದರು. ಪರಿಸರ ಕಾರ್ಯಕರ್ತರಾದ ಹನಿಯ ರವಿ, ಗೊರಸುಕುಡಿಗೆ ಸುಬ್ರಹ್ಮಣ್ಯ ಮೊದಲಾದವರು  ಹಾಜರಿದ್ದರು.

ಗಡಿ ಗುರುತಿಸಿದ ವರದಿ ಸಿದ್ಧ
ಕರ್ನಾಟಕದಲ್ಲಿ ಪಶ್ಚಿಮಘಟ್ಟದ ಗಡಿ ಗುರುತಿಸುವ ವೈಜ್ಞಾನಿಕ ದಾಖಲೆ ಸರ್ಕಾರದ ಬಳಿ ಇದ್ದು, ಅದರಲ್ಲಿನ ಸಣ್ಣಪುಟ್ಟ ಲೋಪ ಸರಿಪಡಿಸಿ ಅಧಿಕೃತವಾಗಿ ಘೋಷಿಸುವ ಕಾರ್ಯವನ್ನು ತಕ್ಷಣವೇ ಮಾಡಬೇಕು ಎಂದು ಅನಂತ ಹೆಗಡೆ ಆಶೀಸರ ಆಗ್ರಹಿಸಿದರು.
ರಾಜ್ಯದಲ್ಲಿನ ಪಶ್ಚಿಮಘಟ್ಟದ ಗಡಿ ಗುರುತಿಸುವ ವರದಿ ಬೆಂಗಳೂರಿನ ವಿಧಾನಸೌಧ ಪಕ್ಕದ ಬಹುಮಹಡಿ ಕಟ್ಟಡದಲ್ಲಿದೆ. ಸಂಬಂಧಪಟ್ಟವರು ಈ ಬಗ್ಗೆ ಆಸಕ್ತಿ ತೆಗೆದುಕೊಂಡು ಒಂದು ತೀರ್ಮಾನಕ್ಕೆ ಬರಬೇಕು. ಅದರ ಹೊರತಾಗಿ ಕಸ್ತೂರಿ ರಂಗನ್ ಅವರ ವರದಿಯನ್ನು ಹಿಡಿದು ಅಳೆದು ತೂಗುವ ನಿರ್ಧಾರ ಸರ್ಕಾರ ಏಕೆ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement