ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಕ್ಕಳ ಮಾರಾಟ ತಡೆಗೆ ನಿಗಾ ವಹಿಸಿ

Lingaraj Badiger
Updated On : 26 Nov 2013, 10:41 am

ಕ.ಪ್ರ.ವಾರ್ತೆ, ಶಿವಮೊಗ್ಗ, ನ. 25
ಕೋಲ್ಕತ್ತಾ ಮತ್ತು ಮುಂಬೈ ಮಹಾ ನಗರಗಳ ಕೆಲವು ಸ್ಥಳಗಳಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳ ಮಕ್ಕಳು ಇರುವ ಬಗ್ಗೆ ಆಗಾಗ್ಗೆ ಮಾಹಿತಿ ಬರುತ್ತಿವೆ. ಅಂತಹ ಮಕ್ಕಳಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಮಕ್ಕಳು ಇರಬಹುದಾಗಿದ್ದು, ಹೀಗಾಗಿ ಮಕ್ಕಳನ್ನು ಸರಬರಾಜು ಮಾಡುವ ಅಥವಾ ಮಾರಾಟ ಮಾಡುವ ವ್ಯಕ್ತಿಗಳ ಮೇಲೆ ನಿಗಾ ವಹಿಸಿ, ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಸಾಂತ್ವನ ಮಹಿಳಾ ಸಹಾಯವಾಣಿ, ವರದಕ್ಷಿಣೆ ನಿಷೇದ ಕಾಯ್ದೆ ಅನುಷ್ಠಾನ, ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ಹಾಗೂ ಮಾದಕ ವಸ್ತು ಮಾರಾಟ ಮತ್ತು ಸೇವನೆ ನಿಷೇಧ ಮುಂತಾದ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ. ವಿಶ್ವನಾಥ್ ಮಾತನಾಡಿ, ಉತ್ತರ ಪ್ರದೇಶದಿಂದ ಇಲ್ಲಿಗೆ ಬಂದಿರುವ ಐವರು ಮಕ್ಕಳನ್ನು ಗುರುತಿಸಿದ್ದು, ಅವರನ್ನು ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ದಾಖಲಿಸಲಾಗಿದೆ. ಇವರ ರಕ್ಷಣೆಗೆ ಹಾಗೂ ಬಂಧಮುಕ್ತಗೊಳಿಸಲು ಉತ್ತರ ಪ್ರದೇಶದ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ಜಾಗೃತಿ ಅಗತ್ಯ: ಕೌಟುಂಬಿಕ ದೌರ್ಜನ್ಯ ಕೇವಲ ಅಪರಾಧ ಮಾತ್ರವಲ್ಲ. ಅದೊಂದು ಜಾಗತಿಕ ಮಟ್ಟದ ಸಾಮಾಜಿಕ ಪಿಡುಗಾಗಿದೆ. ಮಹಿಳೆಯರ ಅಸ್ತಿತ್ವ ಮತ್ತು ಸಮಾನತೆಯ ಬಗ್ಗೆ ಗೌರವ ಬೆಳೆಸಿಕೊಳ್ಳುವಂತೆ ಮಾಡುವುದರ ಜೊತೆಗೆ ಮಹಿಳೆಯರೊಂದಿಗಿನ ಸಂಬಂಧದೆಡೆಗೆ ಸಕಾರಾತ್ಮಕವಾಗಿ ಸಮಾಜವನ್ನು ಜಾಗೃತಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ತಿಳಿಸಿದರು.
ಕೈಜೋಡಿಸಿ: ಪುರುಷರ ಮನೋಭಾವದಲ್ಲಿ ಬದಲಾವಣೆ ತರದ ಹೊರತು ಮಹಿಳಾ ಪರವಾಗಿ ಯಾವುದೇ ಕಾನೂನು ರಚಿಸಿದರೂ ಪ್ರಯೋಜನವಾಗಲಾರದು. ಆದ್ದರಿಂದ ಸಮಾಜದ ಮತ್ತು ಜನರ ಮಾನಸಿಕ ಸ್ಥಿತಿಯನ್ನು ಪರಿವರ್ತಿಸುವಲ್ಲಿ ಆಂದೋಲನ ರೂಪದಲ್ಲಿ ಕಾರ್ಯಕ್ರಮಗಳು ಅನುಷ್ಠಾನಗೊಳಿಸಬೇಕು. ಅದಕ್ಕಾಗಿ ಸರ್ಕಾರದೊಂದಿಗೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಬೇಕೆಂದರು.
ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡುವುದು, ಅವಾಚ್ಯ ಶಬ್ದಗಳಿಂದ  ನಿಂದಿಸುವುದು, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ. ಹಿರಿಯ ಮಹಿಳೆಯರು, ತಾಯಂದಿರು ಕೂಡ ಮಕ್ಕಳಿಂದ ಹಿಂಸೆಗೆ ಒಳಗಾಗುತ್ತಿದ್ದಾರೆ. ಅವರಿಗೂ ಮಾನವೀಯ ನೆಲೆಯಲ್ಲಿ ಸಾಂತ್ವನ, ಸಮಾಧಾನ ಹೇಳುವ ಅಗತ್ಯವಿದೆ ಎಂದರು.
ಆಂದೋಲನ: ಇತ್ತೀಚೆಗೆ ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಹಿಂಸೆಗೊಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಪ್ರಕರಣಗಳು ಸಂಭವಿಸದಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದ ಅವರು, ಮಹಿಳೆ ಮತ್ತು ಮಕ್ಕಳ ಸಾಗಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಶೀಘ್ರದಲ್ಲಿ ತಾಲೂಕು ಮಟ್ಟದಲ್ಲಿ ಜನಜಾಗೃತಿ ಆಂದೋಲನ ನಡೆಸಲಾಗುವುದೆಂದರು.
ಮಹಿಳಾ ಸಹಾಯವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಗುರುತುಪತ್ರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ಸಹಾಯವಾಣಿ ಕೇಂದ್ರಗಳ ಸಿಬ್ಬಂದಿ ವೇತನ-ಭತ್ಯೆ ಪರಿಷ್ಕರಿಸುವ ಬಗ್ಗೆ ಇಲಾಖಾ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಬಿ.ದಯಾಳು, ಜಿಪಂ ಸದಸ್ಯ ಬಿ.ಯಲ್ಲಪ್ಪ, ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸಾಂತ್ವನ ಸಹಾಯವಾಣಿ ಕೇಂದ್ರಗಳ ಸಮಾಲೋಚಕರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement