ರಾಜ್ಯದಲ್ಲಿ ನಾಟಕ ಶಾಲೆ ಆರಂಭವಾಗಲಿ: ಶ್ರೀಕಂಠ
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 25
ರಾಷ್ಟ್ರೀಯ ನಾಟಕ ಶಾಲೆ ಶಾಖೆ ಅಲ್ಲ, ನಾಟಕ ಶಾಲೆಯೇ ಕರ್ನಾಟಕದಲ್ಲಿಯೂ ಆರಂಭ ಆಗಬೇಕು. ಇದರಿಂದ ಇಲ್ಲಿನ ಪ್ರತಿಭೆಗಳಿಗೆ ರಂಗ ಚಟುವಟಿಕೆ ಮುಂದುವರಿಸಲು ಸಾಧ್ಯವಾಗುತ್ತೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಕಂಠ ಕೂಡಿಗೆ ಹೇಳಿದರು.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಸೋಮವಾರ ಸಂಜೆ ಮೈಸೂರು ರಂಗಾಯಣ ಆಯೋಜಿಸಿರುವ ನಾಲ್ಕು ದಿನಗಳ ನಾಟಕೋತ್ಸವ ಉದ್ಘಾಟಿಸಿದ ಅವರು, ನಾಟಕವನ್ನು ಕಲೆಗಾಗಿ ಕಲೆ, ಮನರಂಜನೆಗಾಗಿ ಮನರಂಜನೆ ಅಂತ ತಿಳಿಯಬೇಕಾಗಿಲ್ಲ. ಅದೇ ರೀತಿ ನಾಟಕಗಳ ನಿರ್ದೇಶಕರು ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಇಂತಹ ಅನೇಕ ಪ್ರಕ್ರಿಯೆಗಳು ಇಂದು ನಡೆಯುತ್ತಿವೆ. ಪಠ್ಯಗಳು, ಪದ್ಯಗಳು ನಾಟಕವಾಗುತ್ತಿವೆ. ಅಡಿಗರ ಭೂಮಿಗೀತ, ದೇವನೂರು ಮಹದೇವರ ಕಾದಂಬರಿಗಳು ರಂಗದ ಮೇಲೆ ಬರುತ್ತಿವೆ, ಇದು ವಿಶೇಷ ಎಂದರು.
ಸಾಮಾಜಿಕ ಪ್ರಜ್ಞೆ: ರಂಗಭೂಮಿಗೆ ಸಾಮಾಜಿಕ ಪ್ರಜ್ಞೆ ಬೇಕು. ಸಾಮಾಜಿಕ ಬದಲಾವಣೆಗಾಗಿಯೇ ನಾಟಕ, ಅನುಮಾನವಿಲ್ಲ. ವೇದಿಕೆಯಲ್ಲಿ ಮೂಡುವ ರಂಗಕೃತಿ ಆಲೋಚನೆಯತ್ತ ತಲುತ್ತದೆ. ಇದು ಪ್ರಮುಖ ಮಾಧ್ಯಮ. ನಮ್ಮ ನಿಮ್ಮ ನಡುವೆ ಸೇತುವೆ ಹಾಕುವಂತಹದ್ದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಬಾವಿಕಟ್ಟೆ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉಪಸ್ಥಿತರಿದ್ದರು. ಮಂಜುನಾಥ ಬೆಳಕೆರೆ ನಿರೂಪಿಸಿದರು.