ಶಾದಿಭಾಗ್ಯ ದಲಿತರಿಗೂ ವಿಸ್ತರಿಸಲು ಆಗ್ರಹ
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 25
ಶಾದಿಭಾಗ್ಯ ಯೋಜನೆಯನ್ನು ದಲಿತ ಸಮುದಾಯಕ್ಕೆ ವಿಸ್ತರಿಸಬೇಕು ಹಾಗೂ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸೋಮವಾರ ರಾಜ್ಯ ದಲಿತ ಯುವ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರಸಭೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ದಲಿತರಿಗೆ ವಂಚನೆ: ದಲಿತ ಸಮುದಾಯಗಳಿಗೆ ನೀಡುವ ಸೌಲಭ್ಯಗಳನ್ನು ಸರ್ಕಾರ ಸರಿಯಾಗಿ ವಿತರಣೆ ಮಾಡದೆ ವಂಚಿಸಲಾಗುತ್ತಿದೆ. ಅಲ್ಲದೇ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ದೊರೆಯುವ ಸಾಲ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಜನರಿಗೆ ಸಿಗುತ್ತಿಲ್ಲ. ಸರ್ಕಾರದ 22.75 ಯೋಜನೆಯಡಿಯಲ್ಲಿ ನಗರಸಭೆಯಿಂದಾಲಿ, ಬ್ಯಾಂಕ್‌ಗಳಿಂದಾಗಲಿ ಸಾಲ ಸೌಲಭ್ಯ ದೊರೆಯದೇ ದಲಿತರು ಇನ್ನೂ ಗುಡಿಸಲಿನಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
30-40 ವರ್ಷಗಳಿಂದ ಬಗರ್‌ಹುಕುಂ ಸಾಗುವಳಿದಾರರಿಗೆಗೆ ಸಾಗುವಳಿ ಚೀಟಿ ನೀಡದೆ ಸಕ್ರಮಗೊಳಿಸಿಲ್ಲ. ಕೊಳಚೆ ಪ್ರದೇಶಗಲ್ಲಿ ವಾಸಿಸುವ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೇಡಿಕೆ ಈಡೇರಿಸಿ: ಡಾ ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಪಡೆದ ಬ್ಯಾಂಕ್ ಸಾಲ ಮನ್ನಾ ಮಾಡಬೇಕು. ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಶಿವಮೊಗ್ಗ ನಗರಸಭೆಯಿಂದ ದಲಿತರಿಗೆ ನೀಡಿರುವ ಹಕ್ಕುಪತ್ರ ಸಕ್ರಮಗೊಳಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಎನ್.ರಾಮು, ರಾಜ್ಯ ಕಾರ್ಯಾಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ, ಎನ್.ಕೆ.ಪರುಶುರಾಮ್, ಎನ್.ಮಲ್ಲಿಕಾರ್ಜುನ, ಶಿವಮೂರ್ತಿ ಮತ್ತಿತರರು ಇದ್ದರು.