'ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ವಿಫಲ'
ಕ.ಪ್ರ.ವಾರ್ತೆ, ಸಾಗರ, ನ. 25
ಜನರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ನಗರಸಭೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ. ನಗರವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ವ್ಯಾಪಿಸಿದ್ದು, ಆಶ್ರಯ ನಿವೇಶನ ಕಬಳಿಕೆಯಲ್ಲಿ ಕಾಂಗ್ರೆಸ್ ಸದಸ್ಯರ ಪಾತ್ರ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ ಎಂದು ಕರ್ನಾಟಕ ಜನತಾ ಪಕ್ಷ ದೂರಿದೆ.
ಈ ಸಂಬಂಧ ಪೌರಾಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದ ಪಕ್ಷದ ಕಾರ್ಯಕರ್ತರು, ನಗರದಲ್ಲಿ ಆರೋಗ್ಯ ಸಮಸ್ಯೆ ದಿನೇದಿನೇ ಹೆಚ್ಚುತ್ತಿದೆ. ಈಗಾಗಲೆ ನಗರವ್ಯಾಪ್ತಿಯಲ್ಲಿ 90ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣ ದಾಖಲಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದರು.
ಬಡವರಿಗೆ ವಂಚನೆ: ಕೆಲವು ನಗರಸಭೆ ಸದಸ್ಯರು ಆಶ್ರಯ ನಿವೇಶನಗಳನ್ನು ಅಕ್ರಮವಾಗಿ ಕಬಳಿಸಿ ಬಡವರಿಗೆ ವಂಚನೆ ಮಾಡುತ್ತಿದ್ದಾರೆ. ಅಕ್ರಮ ಖಾತೆ ಮಾಡಲು ಒಪ್ಪದ ನಗರಸಭೆಯ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ನಗರವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಆಶ್ರಯ ಹಗರಣವನ್ನು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ತರಿಗೆ ಶಿಕ್ಷೆ ನೀಡಬೇಕು. ಇಲ್ಲವಾದರೆ ಕೆ.ಜೆ.ಪಿ. ವತಿಯಿಂದ ಸರಣಿ ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಕೆ.ಜೆ.ಪಿ. ಮುಖಂಡರಾದ ಟಿ.ಡಿ.ಮೇಘರಾಜ್, ವಿ.ಮಹೇಶ್, ಕೆ.ಆರ್.ಗಣೇಶಪ್ರಸಾದ್, ರಾಮಣ್ಣ ಗಾಣಿಗ, ಸುಪ್ರೀತ್, ಪ್ರಕಾಶ್ಕುಂಠೆ, ನಾಗರಾಜ್, ಮಹೇಶ್, ಆನಂದ ಭಂಡಾರಿ, ವಿಜಯಕುಮಾರ್ ಪಾಟೀಲ್, ಆಸೀಫ್, ಜೇಲಾನಿ ಇನ್ನಿತರರು ಹಾಜರಿದ್ದರು.