ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಾಲು ಉತ್ಪಾದಕ ಸಿಬ್ಬಂದಿ ಮೇಲೆ ದೌರ್ಜನ್ಯ ತಡೆಗೆ ಆಗ್ರಹ

Lingaraj Badiger
Updated On : 26 Nov 2013, 10:47 am

ಕ.ಪ್ರ.ವಾರ್ತೆ, ಶಿವಮೊಗ್ಗ, ನ. 25
ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ನಗರದ ಸೈನ್ಸ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘದ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಂಘದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ದೌರ್ಜನ್ಯ: ಸಹಕಾರ ಸಂಘಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ರಜೆ ಇಲ್ಲದೆ, ಕನಿಷ್ಠ 8 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಸಿಬ್ಬಂದಿ ಇಂದಿನ ದಿನಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾನೆ. ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾನೆ ಎಂದು ಪ್ರತಿಭಟನಾಕಾರರು ದೂರಿದರು.
ಸಂಘದಲ್ಲಿ ಗುಣಮಟ್ಟದ ಹಾಲು ಶೇಖರಣೆ ಮಾಡುಬೇಕಿದೆ. ಆದರೆ, ಹಾಲು ಉತ್ಪಾದಕರಿಂದ ಆ ವಿಚಾರ ಕುರಿತಂತೆ ಸಿಬ್ಬಂದಿ ಮೇಲೆ ಮಾನಸಿಕ, ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಸಂಘದ ಆಡಳಿತ ಮಂಡಳಿ, ಒಕ್ಕೂಟ ಹಾಗೂ ಸಹಕಾರ ಇಲಾಖೆಯಿಂದ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಸೇವಾ ಭದ್ರತೆ ಇಲ್ಲ: ಸಂಘದ ಸಿಬ್ಬಂದಿ ಸೇವಾ ಅವಧಿ ಮುಗಿಯುತ್ತಾ ಬಂದರೂ ಯಾವುದೇ ಸೇವಾ ಭದ್ರತೆ ಇಲ್ಲ. ಹೀಗಾಗಿ ಸಂಘದ ಸಿಬ್ಬಂದಿ ಸಹಕಾರ ಇಲಾಖೆ ಮೂಲಕ ಕಾಮನ್ ಕೇಡರ್ ಅಥಾರಿಟಿ ಅಳವಡಿಸುವುದು ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಂಘದ ಸಿಬ್ಬಂದಿಗೆ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಯಾವುದೇ ಕಾರಣವಿಲ್ಲದೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಯನ್ನು ವಜಾಗೊಳಿಸುತ್ತಿದ್ದಾರೆ. ಬೇಕಾಬಿಟ್ಟಿಯಾಗಿ ನಡೆಸಿಕೊಳ್ಳಲಾಗುತ್ತಿದೆ. ಮಹಿಳಾ ಸಂಘಗಳಲ್ಲಿ ಸಿಬ್ಬಂದಿ ಮೇಲೆ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾಯಂ ಮಾಡಿ: ಸಂಘದ ಸಿಬ್ಬಂದಿಯನ್ನು ಅರೆಕಾಲಿಕ ನೌಕರರೆಂದು ಪರಿಗಣಿಸಿದ್ದಾರೆ. ಇವರನ್ನು ಕಾಯಂ ನೌಕರರೆಂದು ಪರಿಗಣಿಸಬೇಕು. ಸಂಘದದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಸಿಬ್ಬಂದಿಗೆ ನಿವೃತ್ತಿ ನಂತರ ದೊರೆಯಬೇಕಾದ ಗ್ರಾಚ್ಯುಟಿ ಮತ್ತು ಭವಿಷ್ಯನಿಧಿ ಕೊಡಬೇಕು ಎಂದು ಆಗ್ರಹಿಸಿದರು.
ರಾಸುಗಳಿಗೆ ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ಕೆಎಂಎಫ್‌ನಿಂದ ನೀಡುತ್ತಿದ್ದ ಗೌರವಧನ ನಿಲ್ಲಿಸಲಾಗಿದೆ. ಸರ್ಕಾರ ಹಾಲು ಉತ್ಪಾದಕರಿಗೆ ಪ್ರಕಟಿಸುವ ಪ್ರೋತ್ಸಾಹಧನ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ತಿಳಿಸಿದರು.
ಕೆ.ಎಸ್. ಶೇಖರಪ್ಪ, ಚಂದ್ರಶೇಖರ್, ಎಂ. ರಮೇಶ್, ಯಶವಂತ್, ಪುಟ್ಟಸ್ವಾಮಿ, ವೆಂಕಟೇಶ್, ರುದ್ರಪ್ಪ, ಸುಜಾತ, ಗೀತಾ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement