ಛದ್ಮವೇಷ ಸ್ಪರ್ಧೆಯಿಂದ ಸಂಸ್ಕೃತಿ ಅನಾವರಣ
ಜೋಗ್ ಫಾಲ್ಸ್: ಛದ್ಮವೇಷ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ನಾಡಿನ ಭವ್ಯ ಸಂಸ್ಕೃತಿಯ ಅನಾವರಣಕ್ಕೆ ಅನುಕೂಲವಾಗುತ್ತದೆ ಎಂದು ಎಂ.ಜಿ.ಎಚ್.ಇ ಮಹಿಳಾ ಮಂಡಳಿ ಉಪಾಧ್ಯಕ್ಷೆ ಗೀತಾಶಿವಾಜಿ ತಿಳಿಸಿದರು.
ಇಲ್ಲಿನ ಎಂ.ಜಿ.ಎಚ್.ಇ ಮಹಿಳಾ ಮಂಡಳಿಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿವಿಧ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಸುವುದರ ಜೊತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಹೆಚ್ಚಿನ ಮಾಹಿತಿ, ಮಾರ್ರ್ಗದರ್ಶನ ದೊರೆಯಲು ಸಾಧ್ಯ. ಅಲ್ಲದೇ ಇಂದಿನ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಲಿವೆ ಎಂದುರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಬಿ. ಸರೋಜ, ನೂತನ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬಂದ ನಂತರ ಕಳೆದ 2-3 ವರ್ಷಗಳಿಂದ ವಿದ್ಯಾ ಕೇಂದ್ರದಲ್ಲಿ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಂಪೂರ್ಣವಾಗಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ ಎಂದು ತಿಳಿಸಿದರು.
ಶರಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಆಶಾಬಾಯಿ, ಕೆಪಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎಸ್. ಸತೀಶ್, ಶಿಕ್ಷಕ ಅನಂತಾಚಾರ್ಯ, ನಲ್ಲಾರೆಡ್ಡಿ ಮತ್ತಿತರರು ಇದ್ದರು.