ನಾಟಕೋತ್ಸವದಲ್ಲಿ ರೈತನ ಸ್ಮರಣೆ
ಕ.ಪ್ರ.ವಾರ್ತೆ, ಶಿವಮೊಗ್ಗ, ನ. 27
ಜನರಿಗೆ ಹತ್ತಿರವಾಗಿರುವುದೇ ನಾಟಕ. ಜನರನ್ನು ಹೊರತುಪಡಿಸಿ ರಂಗಭೂಮಿ ಇಲ್ಲ ಎಂದು ತೋರಿಸುವಂತೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜನೆಯಾಗಿರುವ ಮೈಸೂರು ರಂಗಾಯಣದ ನಾಟಕೋತ್ಸವ ಆರಂಭಕ್ಕೆ ಮುನ್ನ ಬೆಳಗಾವಿ ಸುವರ್ಣ ವಿಧಾನ ಸೌಧದ ಎದುರು ಆತ್ಮಹತ್ಯೆ ಮಾಡಿಕೊಂಡ ರೈತ ವಿಠ್ಠಲ ಅವರನ್ನು ಸ್ಮರಿಸಿ ಮೌನಾಚರಿಸಲಾಯಿತು. ರೈತನ ಆತ್ಮಹತ್ಯೆ ಎಲ್ಲರ ನೋವಿನ ಪ್ರತೀಕವಾಗಿದೆ ಎಂದು ಹೇಳಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ದೇವೇಂದ್ರ ಬೆಳೆಯೂರು, ರಂಗನಿರ್ದೇಶಕ ಪ್ರೊ. ಎಸ್.ಸಿ. ಗೌರಿಶಂಕರ್ ಮಾತನಾಡಿದರು. ರಂಗಕರ್ಮಿ ಆಚಿ ಪ್ರಕಾಶ್ ಉಪಸ್ಥಿತರಿದ್ದರು. ಮೈಸೂರು ರಂಗಾಯಣದ ಉಪನಿರ್ದೇಶಕ ಬಾವಿಕಟ್ಟಿ ಸ್ವಾಗತಿಸಿದರು.
ನಂತರ ಕುವೆಂಪು ಅವರ ಶೂದ್ರ ತಪಸ್ವಿ ನಾಟಕ ಪ್ರದರ್ಶನಗೊಂಡಿತು. ಸಿ. ಬಸವಲಿಂಗಯ್ಯ ಅವರು ನಿರ್ದೇಶಿಸಿದ್ದರು.
ಎರಡನೇ ದಿನದ ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾಂತೇಶ್ ಕದರಮಂಡಲಗಿ, ಭದ್ರಾವತಿಯ ರಂಗಕರ್ಮಿ ಶಂಕರಮೂರ್ತಿ ಉಪಸ್ಥಿತರಿದ್ದರು.
ಸರ್ಕಾರದ ನಿರ್ಲಕ್ಷ್ಯದಿಂದ ರೈತ ಆತ್ಮಹತ್ಯೆ: ಆರೋಪ
ಶಿರಾಳಕೊಪ್ಪ: ಕಬ್ಬು ಬೆಳೆಯುವ ರೈತರನ್ನು ಅವರು ಕೈಗೊಂಡ ರೋರಾಟವನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದ ಸರ್ಕಾರದ ನಿರ್ಲಕ್ಷ್ಯದಿಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಉಡಗಣಿ- ತಾಳಗುಂದ ಹೋಬಳಿ ರೈತ ಹೋರಾಟ ಸಮಿತಿ ಅಧ್ಯಕ್ಷ ಮುಗಳಿಕೊಪ್ಪದ ರಾಜಣ್ಣ ಹಾಗೂ ಕಾರ್ಯದರ್ಶಿ ಉಡಗಣಿ ಕೆ.ಜಿ ಕೊಟ್ಟೇಶ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಬ್ಬು ಬೆಳೆಗಾರರ ನಾಯಕರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕೈಗೊಂದಿದ್ದರೆ ವಿಠಲ ಅರಭಾವಿ ವಿಷ ಸೇವಿಸುತ್ತಿರಲಿಲ್ಲ ಎಂದು ತಿಳಿಸಿರುವ ಅವರು, ತಕ್ಷಣ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.