ಬಸ್ಸು ಡಿಕ್ಕಿ; ಬೈಕ್ ಸವಾರ ಸಾವು
ಶಿವಮೊಗ್ಗ: ನಗರದ ಕಾಮತ್ ಪೆಟ್ರೋಲ್ ಬಂಕ್ ಎದುರು ಕೆಎಸ್ಆರ್ಟಿಸಿ ಬಸ್ಸು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆ ವಿರೋಧಿಸಿ ಸ್ಥಳೀಯರು, ಯವಕನ ಕುಟುಂಬ ಸದಸ್ಯರು ಹಾಗೂ ಕರವೇ ಕಾರ್ಯಕರ್ತರು ಬಸ್ಸು ನಿಲ್ದಾಣದ ಎದರು ಯುವಕನ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಗೌಡಸ್ವಾರಸ್ವತ ಕಲ್ಯಾಣ ಮಂದಿರದ ಬಳಿ ಇರುವ ಪ್ರವೀಣ್ (24) ಮೃತ ಯುವಕ. ಈತ ಬುಧವಾರ ಬೆಳಗ್ಗೆ ಕಾಮತ್ ಪೆಟ್ರೋಲ್ ಬಂಕ್ ಎದುರು ಬೈಕ್ನಲ್ಲಿ ಹೋಗುವಾಗ ಕೆಎಸ್ಆರ್ಟಿಸಿ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪ್ರತಿಭಟನೆ: ಆದರೆ, ಚಾಲಕ ಬಸ್ಸು ನಿಲ್ಲಿಸದೇ ಹಾಗೆ ಹೋಗಿದ್ದು, ಇದನ್ನು ಖಂಡಿಸಿ ಕರವೇ ಕಾರ್ಯಕರ್ತರು ಯುವಕನ ಕುಟುಂಬ ಸದಸ್ಯರೊಂದಿಗೆ ಬಸ್ಸು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಮೃತ ಯುವಕ ಬಡ ಕುಟಂಬದವನ್ನಾಗಿದ್ದಾನೆ. ಈತ ಮಿಕ್ಸಿ ಮತ್ತು ಸ್ಟೀಲ್ ಪಾತ್ರೆ ವ್ಯಾಪಾರ ಮಾಡುತ್ತಿದ್ದ. ಇಡೀ ಕುಟುಂಬಕ್ಕೆ ಈತನೇ ಜೀವನಾಧರವಾಗಿದ್ದಾನೆ. ಆದರಿಂದ ತಕ್ಷಣ ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಸೂಚಿಸಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು.
ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಪಘಾತ ಮಾಡಿ ಬಸ್ ನಿಲ್ಲಸದೆ ಹೋದ ಚಾಲಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಸಂಚಾರ ಠಾಣೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
--
ಇಂದು 'ಕೃಷ್ಣೇಗೌಡನ ಆನೆ' ಪ್ರದರ್ಶನ
ಶಿವಮೊಗ್ಗ: ರಂಗಾಯಣ ನಾಟಕೋತ್ಸವದ ಕೊನೆಯ ದಿನವಾದ ಗುರುವಾರ ಸಂಜೆ 6.30ಕ್ಕೆ ಆರ್. ನಾಗೇಶ್ ಅವರ ನಿರ್ದೇಶನದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧರಿಸಿದ ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನಗೊಳ್ಳುವುದು.
ಇದಕ್ಕೂ ಮುನ್ನ ಸಮಾರೋಪ ಸಮಾರಂಭವು ಮೈಸೂರು ರಂಗಾಯಣದ ನಿರ್ದೇಶಕ ಎಚ್. ಜನಾರ್ದನ (ಜನ್ನಿ) ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ರಂಗಾಯಣದ ಮಾಜಿ ನಿರ್ದೇಶಕ ಪ್ರಸನ್ನ ಅವರು ಸಮಾರೋಪ ಭಾಷಣ ಮಾಡುವರು. ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರು, ಕವಯಿತ್ರಿ ಮಲ್ಲಿಕಾ ಘಂಟಿ ಭಾಗವಹಿಸುವರು.