ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೆರೆಗಳ ಪ್ರಯೋಜನ ಎಲ್ಲರಿಗೂ ದೊರೆಯಲಿ

Lingaraj Badiger
Updated On : 29 Nov 2013, 10:31 am

ಶಿಕಾರಿಪುರ: ಕೆರೆ ಕಟ್ಟೆಗಳು ರೈತ ವರ್ಗದ ಜೀವಾಳವಾಗಿದ್ದು, ಸೂಕ್ತ ರೀತಿಯ ನಿರ್ವಹಣೆ ಮೂಲಕ ಕೆರೆ ಕಟ್ಟೆಗಳ ಪ್ರಯೋಜನ ಮುಂದಿನ ತಲೆಮಾರುಗಳ ಉಪಯೋಗಕ್ಕೆ ಯುವ ಪೀಳಿಗೆ ಎಲ್ಲಾ ರೀತಿಯ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಎಂದು ರಾಜ್ಯ ಕೆರೆ ಅಭಿವೃದ್ದಿ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್ ಗೌಡ ತಿಳಿಸಿದರು.
ಗುರುವಾರ ತಾಲೂಕಿನ ಹುಲಗಿನ ಕಟ್ಟೆ ಗ್ರಾಮದಲ್ಲಿನ ನೂರಾರು ಎಕರೆ ಜಮೀನಿಗೆ ನೀರುಣಿಸುವ ಬೃಹತ್ ಮುರುಗಣ್ಣನ ಕೆರೆಗೆ ಗಂಗಾಪೂಜೆ ನೆರವೇರಿಸಿ ನೀರನ್ನು ಬೇಸಿಗೆ ಬೆಳೆಗೆ ಹರಿಯಲು ತೂಬು ತೆಗೆದು ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರು ಆಸಕ್ತಿ ವಹಿಸಲಿ: ಕಳೆದ ಹಲವು ವರ್ಷದಿಂದ ನಿರಂತರವಾಗಿ ಕೆರೆ ಅಭಿವೃದ್ದಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅಪೂರ್ವ ಅವಕಾಶ ಒದಗಿದೆ.  ಇಂತಹ ಅವಕಾಶ ಕೇವಲ ನನಗೆ ಮಾತ್ರ ಸೀಮಿತವಾಗದೆ ಯುವ ಪೀಳಿಗೆ ಆಸಕ್ತಿ ವಹಿಸಿದಲ್ಲಿ ಎಲ್ಲಾ ರೀತಿಯ ಸಹಕಾರದ ಜತೆಗೆ ಹುದ್ದೆ ತೆರವುಗೊಳಿಸುವುದಾಗಿ ತಿಳಿಸಿದರು.
ಮುರುಗಣ್ಣನ ಕೆರೆ ನೂರಾರು ಎಕರೆ ಜಮೀನಿಗೆ ನೀರನ್ನು ಒದಗಿಸುವ ಬಹು ಪುರಾತನ ಕೆರೆಯಾಗಿದ್ದು, ರೈತ ವರ್ಗದ ಜೀವಾಳವಾಗಿರುವ ಕೆರೆಯ ಸಂಪೂರ್ಣ ಅಭಿವೃದ್ದಿ ಜತೆಗೆ ದೋಣಿ ವಿಹಾರದ ಮೂಲಕ ಪ್ರವಾಸಿ ತಾಣವಾಗಿಸಲು ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳನ್ನು ಆಹ್ವಾನಿಸಿ ಅಭಿವೃದ್ದಿಗೆ ಯತ್ನಿಸೋಣ ಎಂದರು.
ಖಾತ್ರಿ ಬಳಸಿ: ತಾ.ಕೆರೆ ಅಚ್ಚುಕಟ್ಟು ಬಳಕೆದಾರರ ಸಂಘದ ಅಧ್ಯಕ್ಷ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ.ಚಂದ್ರಶೇಖರಪ್ಪ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ಗ್ರಾಮೀಣ ಭಾಗದ ಕೆರೆಗಳ ಪುನರ್ ನಿರ್ಮಾಣಕ್ಕೆ ಗ್ರಾಮಸ್ಥರು ಹೆಚ್ಚಿನ ಗಮನ ನೀಡುವಂತೆ ತಿಳಿಸಿ ಪ.ಜಾತಿಪಂಗಡಕ್ಕೆ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಸೌಲಭ್ಯಗಳ ಸದುಪಯೋಗಕ್ಕೆ ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಪ್ರಭಾಕರ್ ಮಾತನಾಡಿ, ಹನಿ ನೀರಾವರಿ ಯೋಜನೆ ರೈತರ ಬೆಳೆಗೆ ವರದಾನವಾಗಿದ್ದು ಭತ್ತಕ್ಕೆ 180 ಸೆ.ಮಿ ಮಳೆ ಅತ್ಯಗತ್ಯ. ದ್ವಿದಳ ಧಾನ್ಯವಾದ ಶೇಂಗಾ ಮತ್ತಿತರ ಧಾನ್ಯಕ್ಕೆ ಶೇ.60 ನೀರು ಬಳಸಿ ಕೆರೆ ಮೂಲಕ ಹನಿ ನೀರಾವರಿ ಯೋಜನೆಯಲ್ಲಿ ಅರ್ಧ ಅಶ್ವಶಕ್ತಿಯ ಯಂತ್ರದಿಂದ 3 ಎಕರೆ ಜಮೀನಿಗೆ ನೀರು ಹಾಯಿಸಬಹುದಾಗಿದೆ ಎಂದರು.
ಮೀನು ಸಾಕಣೆ:  ಚೌಡೇಶ್ವರಿ ಕೆರೆ ಅಭಿವೃದ್ದಿ ಸಂಘದ ಉಪಾದ್ಯಕ್ಷ ಸುರೇಶ್ ನಾಯ್ಕ್ ಮಾತನಾಡಿ, 64 ಎಕರೆ ವಿಸ್ತೀರ್ಣದ ಮುರುಗಣ್ಣನ ಕೆರೆ 1750 ಮೀ.ಉದ್ದದ ನೀರು ಹಾಯುವ ಕಾಲುವೆಯನ್ನು ಹೊಂದಿದ್ದು ತಾಲೂಕಿನಲ್ಲಿ ಅತೀ ಉದ್ದದ ಕಾಲುವೆಯ ಕೆರೆಯಲ್ಲಿ ಮೀನಿನ ಬೆಳವಣಿಗೆ ದಾಖಲೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಗಿರೀಶ್ ಕುಮಾರ್, ಸತೀಶ್,ಹನುಮಂತಪ್ಪ, ಸುರೇಶ್, ಉಮೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement