ಚಂದ್ರಶೇಖರ್ಗೆ ಶೌರ್ಯ ಪ್ರಶಸ್ತಿ
ಬೆಂಗಳೂರು: ಹೃದಯಾಘಾತದ ನಡುವೆಯೂ ಸಮಯಪ್ರಜ್ಞೆ ಮೆರೆದು ಪ್ರಯಾಣಿಕರ ಪ್ರಾಣ ಕಾಪಾಡಿದ ಮತ್ತು ತೀರ್ಥಹಳ್ಳಿ ಬಳಿ ಕೆರೆಯಲ್ಲಿ ಮುಳುಗುತ್ತಿದ್ದ 7 ಜನರ ಜೀವರಕ್ಷಣೆ ಮಾಡಿದ ಬಿಎಂಟಿಸಿ ಚಾಲಕರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಗುರುವಾರ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಗೌರವ ಸಲ್ಲಿಸಲಾಯಿತು.
ಘಟಕ 2ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಮ್ಮದ್ ರಹಮತ್ ಉಲ್ಲಾ ಅವರಿಗೆ ಮರಣೋತ್ತರ ಪ್ರಶಸ್ತಿ ಹಾಗೂ ಘಟಕ 4ರಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಎಸ್.ಚಂದ್ರಶೇಖರ್ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಹಮ್ಮದ್ ರಹಮತ್ ಉಲ್ಲಾ ಅವರು ಜು. 17ರಂದು ಮಾರ್ಗ ಸಂಖ್ಯೆ ಎಂಎಫ್ 3/1ರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸಂಜೆ ಶಾಂತಿನಗರ ಬಸ್ಸು ನಿಲ್ದಾಣದ ರಸ್ತೆಯಲ್ಲಿ ತೀವ್ರ ಹೃದಯಾಘಾತಕ್ಕೀಡಾಗಿ ಅಸುನೀಗಿದ್ದರು. ಆದರೆ, ಅದಕ್ಕೂ ಮುನ್ನ ಸಮಯಪ್ರಜ್ಞೆ ಮೆರೆದ ಅವರು ಎದೆನೋವು ಕಾಣಿಸಿಕೊಂಡ ತಕ್ಷಣ ವಾಹನವನ್ನು ಸುರಕ್ಷಿತವಾಗಿ ರಸ್ತೆ ಪಕ್ಕ ನಿಲ್ಲಿಸಿ ಅಪಘಾತ ಆಗುವುದನ್ನು ತಪ್ಪಿಸುವ ಜತೆಗೆ ಜೀವಹಾನಿಯನ್ನೂ ತಪ್ಪಿಸಿದ್ದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರು ರಹಮತ್ ಉಲ್ಲಾ ಅವರಿಗೆ ಸಲ್ಲಬೇಕಾದ ಮರಣೋತ್ತರ ಪ್ರಶಸ್ತಿಯನ್ನು ಅವರ ಸಂಬಂಧಿಕರಿಗೆ ಒಪ್ಪಿಸಿ ಗೌರವಿಸಿದರು. ಎಂ.ಎಸ್.ಚಂದ್ರಶೇಖರ್ ಅವರು ಸೆ.17ರಂದು ಸಚಿವ ಕಿಮ್ಮನೆ ರತ್ನಾಕರ್ ಅವರೊಂದಿಗೆ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದಾಗ ಹೆದ್ದಾರಿ-13ರ ಬೇಗುವಳ್ಳಿ ಕೆರೆಯಲ್ಲಿ ಕಾರು ಬಿದ್ದು ಮುಳುಗುತ್ತಿರುವುದನ್ನು ಕಂಡು ಜೀವದ ಹಂಗು ತೊರೆದು ನೀರಿಗೆ ಧುಮುಕಿದ್ದರು. ಜತೆಗೆ, ಮುಳುಗುತ್ತಿದ್ದ ಕಾರಿನಲ್ಲಿದ್ದ 7 ಜನರನ್ನು ರಕ್ಷಿಸಿದ್ದರು. ಅವರಿಗೆ ಶೌರ್ಯಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಬಿಎಂಟಿಸಿ ಅಧಿಕಾರಿ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಬಿಎಂಟಿಸಿ ಎಂಡಿ ಅಂಜುಂ ಪರ್ವೇಜ್, ನಿರ್ದೇಶಕರಾದ ಡಾ.ಜಿ. ರಮೇಶ್, ಕುಮಾರ್ ಪುಷ್ಕರ್, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಸಮಿತಿ ಅಧ್ಯಕ್ಷ ಚನ್ನೇಗೌಡ ಹಾಜರಿದ್ದರು.