'ಆರೋಗ್ಯ ರಕ್ಷಣೆಗೆ ರಕ್ತದಾನ ಮಾಡಿ'
ಶಿವಮೊಗ್ಗ: ದಾನ ಮಾಡುವ ಮನಸ್ಸಿದ್ದಾಗ ಮಾತ್ರ ರಕ್ತದಾನ ಮಾಡಿದರೆ ಅದು ಸಮಾಜಕ್ಕೆ ಶ್ರೇಷ್ಠದಾನವಾಗುತ್ತದೆ ಎಂದು ಸಿಮ್ಸ್ ಕಾಲೇಜ್ನ ಪ್ರೊ. ತನ್ವೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ರೆಡ್ ಕ್ರಾಸ್, ಸಂಜೀವಿನಿ ಬ್ಲಡ್ ಬ್ಯಾಂಕ್ಗಳ ಸಂಯುಕ್ತ ಆಶ್ರಯದಲ್ಲಿ ಗುಡ್ವಿಲ್ ಕನ್ವೆಂಷನ್ ಹಾಲ್ನಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು. ರಕ್ತದಾನ ಮಾಡಲು ಎಲ್ಲರಿಂದಲೂ ಸಾಧ್ಯವಿಲ್ಲ. ನಮ್ಮ ದೇಹದ ತೂಕ 50 ಕೆಜಿಇದ್ದು, ಹಿಮೋಗ್ಲೋಬಿನ್ ಅಂಶ ಶೇ.12 ಇದ್ದು, ದಾನ ಮಾಡಲು ಮನಸ್ಸಿದ್ದಾಗ ರಕ್ತದಾನ ಮಾಡಬೇಕೆಂದು ಅವರು ತಿಳಿಸಿದರಲ್ಲದೇ, ರಕ್ತದಾನ ಮಾಡುವ ಮೂಲಕ ಎಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ರೆಡ್ಕ್ರಾಸ್ ಸಂಜೀವಿನಿ ಬ್ಲಡ್ಬ್ಯಾಂಕ್ನ ಮಂಜುನಾಥ್ ಅಪ್ಪಾಜಿಯವರು ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಸ್ವಯಂಪ್ರೇರಿತ ರಕ್ತದಾನಿಗಳ ಸೇವಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ. ವಿಜಯ್ ಕುಮಾರ್ ಮಾತನಾಡಿದರು. ನಗರಸಭಾ ಅಧ್ಯಕ್ಷೆ ಖುರ್ಷಿದಾ ಶಮೀರ್ ರಕ್ತದಾನಿಗಳನ್ನು ಅಭಿನಂದಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಶಾಹಿದ್ ಖಾನ್, ಬಶೀರ್ ಅಹ್ಮದ್, ಅಜೀಜ್ ಪಾಷಾ ಮತ್ತಿತರರು ಇದ್ದರು.