'ಪಾರಂಪರಿಕ ನೀರಿನ ಹಕ್ಕು ಉಳಿಸಿಕೊಡಲು ಆಗ್ರಹ'
ಹೊಸನಗರ: ಬುಡಕಟ್ಟು ವಾಸಿಗಳ ಪಾರಂಪರಿಕ ನೀರಿನ ಹಕ್ಕನ್ನು ಉಳಿಸಿಕೊಟ್ಟು ಅವರ ಮೆಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಂತೆ ಆಗ್ರಹಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿತು.
ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯ ಮಂಜಗಳಲೆ ಗ್ರಾಮದ ಬೆಳಕ್ಕ, ಕುಂಬಾರಹೊಂಡ, ಕುಂಬಳೆ, ಕೊಳಕಿ, ಹಿಡ್ಲಮನೆ ಮೊದಲಾದ ಪ್ರದೇಶದಲ್ಲಿ ಹಸಲರು ಬುಡಕಟ್ಟು ಸಮುದಾಯಕ್ಕೆ ಸೇರಿದ 60ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕಾಡಿನ ಕಿರು ಉತ್ಪನ್ನಗಳನ್ನು ಸಂಗ್ರಹಿಸಿಕೊಂಡು ಕೃಷಿ ಕಸುಬನ್ನೂ ನಡೆಸುತ್ತಿರುವ ಅವರ ಅನಾದಿಕಾಲದಿಂದ ಉಪಯೋಗಿಸುತ್ತಿರುವ ನೀರಿನ ಹಕ್ಕನ್ನು ಕೆಲವರು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಇವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆದು ಅವರಿಗೆ ಕಾನೂನು ಬದ್ಧವಾಗಿ ಸಿಗಬೇಕಾದ ನೀರಿನ ಹಕ್ಕು ದೊರಕಿಸಿಕೊಡಬೇಕು.
2006ರ ಅರಣ್ಯ ಹಕ್ಕು ಕಾಯ್ದೆಯ 'ಎ' ನಮೂನೆಯಲ್ಲಿ ವೈಯಕ್ತಿಕ ಮತ್ತು 'ಬಿ' ನಮೂನೆಯಲ್ಲಿ ಸಾಮುದಾಯಿಕ ಹಕ್ಕುಪತ್ರವನ್ನು ಇಲ್ಲ ವಾಸಿಸುವ ಎಲ್ಲ ಬುಡಕಟ್ಟು ಜನಾಂಗದವರಿಗೆ ದೊರಕಿಸಿ ಕೊಡಬೇಕು. ಬುಡಕಟ್ಟು ಜನಾಂಗದವರ ಮೇಲೆ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ದೌರ್ಜನ್ಯವನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಿದ ತಹಸೀಲ್ದಾರ್ ಚಿದಂಬರ ಕುಲಕರ್ಣಿ, ಸ್ಥಳ ಪರಿಶೀಲನೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಒಕ್ಕೂಟ ಜಿಲ್ಲಾಧ್ಯಕ್ಷ ರಾಮಣ್ಣ ಕಾರ್ಗಲ್, ಪದಾಧಿಕಾರಿ ಶ್ರೀಧರ, ನಿಟ್ಟೂರು ಗೋವಿಂದ ಮತ್ತಿತರರಿದ್ದರು.