ಬಗರ್ ಹುಕುಂ ಸಕ್ರಮಗೊಳಿಸಿ
ಶಿವಮೊಗ್ಗ: ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂ ರಹಿತರಿಗೆ ಭೂಮಿ ನೀಡುವಂತೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಾಂಕೇತಿಕ ಧರಣಿ ನಡೆಸಿದರು.
2009ರಲ್ಲಿ ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಒಂದು ಸಮಿತಿ ರಚಿಸಿತ್ತು. ಆ ಸಮಿತಿಯು 2011ರಲ್ಲಿ ವರದಿ ಸಲ್ಲಿಸಿದೆ. ಆ ವರದಿಯ ಪ್ರಕಾರ 12ರಿಂದ 15 ಲಕ್ಷ ಎಕರೆ ಸರ್ಕಾರಿ ಭೂಮಿ ಅನಧಿಕೃತವಾಗಿ ಒತ್ತುವರಿಯಾಗಿದೆ. ಅನೇಕ ಕಡೆ ದೊಡ್ಡ ಪ್ಲಾಂಟರ್‌ಗಳು, ದೊಡ್ಡ ಭೂ ಮಾಲಿಕರು ಮತ್ತು ರಿಯಲ್ ಎಸ್ಟೇಟ್ ಭೂ ಮಾಫಿಯಾಗಳು ಸಾವಿರಾರು ಎಕರೆ ಭೂಮಿಯನ್ನು ಅಕ್ರಮವಾಗಿ ಹಿಡಿದುಕೊಂಡಿದ್ದಾರೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಆ ವರದಿಯನ್ನು ಸ್ವೀಕರಿಸಿ, ಒತ್ತುವರಿ ತೆರವುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಾಲಸುಬ್ರಮಣಿಯನ್ ಅವರ ವರದಿಯಲ್ಲಿರುವಂತೆ ಎಸ್ಸಿ, ಎಸ್ಟಿ, ಹಿಂದುಳಿದ ಜಾತಿಗಳು, ಅರಣ್ಯ ವಾಸಿಗಳು ಮತ್ತು ಭೂ ರಹಿತರು ರಾಜ್ಯಾದ್ಯಂತ ಅಕ್ರಮವಾಗಿ ಸಾಗುವಳಿ ಮಾಡಿಕೊಂಡಿರುವುದನ್ನು ಪ್ರತ್ಯೇಕಗೊಳಿಸಿ ಯಾರು ನಮೂನೆ 50, 53ರ ಪ್ರಕಾರ ಅರ್ಜಿ ಸಲ್ಲಿಸಿದ್ದಾರೋ ಅವರ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಿ ತಕ್ಷಣ ಸಾಗುವಳಿ ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಸೀಲಿಂಗ್ ಲಿಮಿಟ್‌ಗಿಂತ ಹೆಚ್ಚುವರಿ ಭೂಮಿಯನ್ನು ಹೊಂದಿರುವ ಭೂ ಮಾಲಿಕರಿಂದ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂ ರಹಿತರಿಗೆ ಹಂಚಿಕೆ ಮಾಡಬೇಕು. ರಾಜ್ಯದ ಶೇ. 80ರಷ್ಟು ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವುದರಿಂದ ಸರ್ಕಾರ ತಕ್ಷಣ ಎಲ್ಲಾ ಹಳ್ಳಿ ಮತ್ತು ನಗರ ಪ್ರದೇಶಗಳಿಗೂ ಒಂದು ಕಾಲ ಮಿತಿಯಲ್ಲಿ ಸ್ಮಶಾನ ಭೂಮಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಳೆದ 66 ವರ್ಷಗಳಿಂದ ಆಳುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಇತರೆ ಪಕ್ಷಗಳ ಸರ್ಕಾರಗಳು ಕನಿಷ್ಟ ಸಂವಿಧಾನದ ಈ ಎರಡು ಅನುಚ್ಛೇದಗಳ ಆಶಯಗಳನ್ನು ಈಡೇರಿಸಿಲ್ಲ.
ಸಂವಿಧಾನದ ಅನುಚ್ಛೇದ 38 ಮತ್ತು 39ರಲ್ಲಿ ದೇಶದ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕ್ರೋಢೀಕರಣವಾಗದಂತೆ ಮತ್ತು ಎಲ್ಲಾ ಜನರಿಗೂ ಸಮಾನವಾಗಿ ಹಂಚಿಕೆಯಾಗುವಂತಹ ಕಾನೂನುಗಳನ್ನು ಸರ್ಕಾರ ಜಾರಿಗೆ ತರಬೇಕೆಂದು ಹೇಳಿದೆ. ಆದರೆ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಬಿಎಸ್ಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು 80 ಲಕ್ಷ ಕುಟುಂಬ.
ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯಿದೆಯ ಫಲಾನುಭವಿಗಳು 80 ಕೋಟಿ ಜನ. ಅಂದರೆ ದೇಶದ ಎರಡನೇ ಮೂರು ಭಾಗ ಜನರಿಗೆ ತಮ್ಮ ನಿತ್ಯದ ಆಹಾರವನ್ನು ಸ್ವತಃ ಸಂಪಾದಿಸಿಕೊಳ್ಳುವ ಸಾಮರ್ಥ್ಯ ಇಂದಿಗೂ ಇಲ್ಲ ಎಂದಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಸರ್ಕಾರ ಜಾರಿಗೆ ತಂದ ಅನೇಕ ಯೋಜನೆಗಳನ್ನು ಗಮನಿಸಿದರೆ ನಮ್ಮ ಸಂವಿಧಾನದ ಆಶಯಗಳೇ ಬೇರೆ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳ ಉದ್ದೇಶವೇ ಬೇರೆ ಎನ್ನಿಸುತ್ತಿದೆ. ಬಡತನ ನಿವಾರಣೆ ಹೆಸರಿನಲ್ಲಿ ಅವರ ಓಟುಗಳನ್ನು ದೋಚಿಕೊಂಡು ಅಧಿಕಾರದ ಗದ್ದುಗೆಯಲ್ಲಿ ಕುಳಿತು ಶ್ರೀಮಂತರ ಪರವಾಗ ಯೋಜನೆಗಳನ್ನು ಜಾರಿಮಾಡುತ್ತಿದ್ದಾರೆ ಎಂದು ಪಕ್ಷದ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಮುಖಂಡರಾದ ಮುನಿಯಪ್ಪ, ವೀರೇಶ್ ಕ್ಯಾತಿನಕೊಪ್ಪ, ಮಂಜುನಾಥ ಗೌಡ, ಬಿ.ಜಿ. ವೆಂಕಟೇಶ್, ಸುರೇಶ್ ಪ್ರಭು, ರವಿ, ದೇವದಾಸ್, ಶೇಖರಪ್ಪ, ಗುಡ್ಡಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.