ಬೊಮ್ಮಾಳ ಎಲಿಸವ್ವಗೆ ಮಾಸಾಶನ ನೀಡಲು ಅಗ್ರಹ
ಹರಪನಹಳ್ಳಿ: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಜಾನಪದ ಹಾಡುಗಾರ್ತಿ ಬೊಮ್ಮಾಳ ಎಲಿಸವ್ವಗೆ ಸರ್ಕಾರ ಜೀವನ ಭದ್ರತೆ ನೀಡಬೇಕೆಂದು ಶಿವಶರಣ ಮಾದಾರ ಚನ್ನಯ್ಯ ಯುವಕ ಸಂಘದ ತಾಲೂಕಾಧ್ಯಕ್ಷ ಎಸ್.ನಿಂಗಪ್ಪ ಒತ್ತಾಯಿಸಿದರು.
ಅವರು ಉಚ್ಚಂಗಿದುರ್ಗದಲ್ಲಿ ಶ್ರೀಉಚ್ಚೆಂಗೆಮ್ಮ ವಿದ್ಯಾ ಸಂಸ್ಥೆವತಿಯಿಂದ ರೇಣುಕಾ ಸ್ವತಂತ್ರ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಸಾಶನ ನೀಡಿ: ಎಲಿಸವ್ವ ನಿರಂತರವಾಗಿ ಎರಡು ದಿನಗಳ ಕಾಲ ಸೋಬಾನೆ ಪದಗಳನ್ನು ಹಾಡುವಂತಹ ಕಲಾವಿದೆ ಭೀಕ್ಷೆ ಬೇಡಿ ಜೀವನ ನಡೆಸಬೇಕಾದಂತಹ ಪರಿಸ್ಥಿತಿಯಿದೆ. ಅದ್ದರಿಂದ ಅವರಿಗೆ 5 ಎಕರೆ ಜಮೀನು ನೀಡಿ, ಮಾಸಿಕ 10 ಸಾವಿರ ಮಾಸಾಶನ ನೀಡಬೇಕೆಂದು ಸರ್ಕಾರಕ್ಕೆ ಅಗ್ರಹಿಸಿದರು.
ಕಾರ್ಖಾನೆ ಮಾಲೀಕರಿಗೆ ಪ್ಯಾಕೇಜ್: ಶಾಮನೂರು ಸ್ವಾಗತ
ದಾವಣಗೆರೆ: ಕಬ್ಬು ಅರೆಯುವ ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಪ್ಯಾಕೇಜ್ ರೂಪದಲ್ಲಿ ನೆರವು ನೀಡಲು ಮುಂದಾಗಿದ್ದು, ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಎಪಿಎಂಸಿ ಮಾರುಕಟ್ಟೆ, ತೋಟಗಾರಿಕೆ ಸಚಿವ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆ ರೈತ ಭವನದ ಪಕ್ಕದಲ್ಲಿ ಶನಿವಾರ ಕರವೇ ಎಪಿಎಂಸಿ ನಗರ ಘಟಕ, ಎಪಿಎಂಸಿ ತರಕಾರಿ ದಲ್ಲಾಲರು, ಗುಮಾಸ್ತರ, ಹಮಾಲರ ಸಂಘಗಳು, ಚಿಲ್ಲರೆ ತರಕಾರಿ ವ್ಯಾಪಾರಸ್ಥರು, ನಗರ ಸಂಚಾರಿ ಗಾಡಿ ತರಕಾರಿ ವ್ಯಾಪಾರಸ್ಥರ ಸಂಘ ಹಾಗೂ ರೈತರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸುಧಾರಿತ ತರಕಾರಿ ಗಾಡಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮೂಢನಂಬಿಕೆ ತಡೆಗೆ ಕಾನೂನು ಅತ್ಯಗತ್ಯ: ಶ್ರೀ
ಹರಪನಹಳ್ಳಿ: ಮೂಢ ನಂಬಿಕೆ ನಿವಾರಣೆಗೆ ಗಟ್ಟಿ ಕಾನೂನು ಅತ್ಯಗತ್ಯ ಎಂದು ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಸಿದ್ದಲಿಂಗೇಶ್ವರ ಮಹಾ ಸ್ವಾಮಿಗಳು ಪ್ರತಿಪಾದಿಸಿದ್ದಾರೆ.
ಅವರು ಪಟ್ಟಣದ ಗೊರವಿನ ತೋಟದಲ್ಲಿ ಇರುವ ಪುರಸಭೆಯ ಸಮುದಾಯ ಭವನದಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮನೆ ಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗಟ್ಟಿ ಕಾನೂನು ಅಗತ್ಯ: ಬಾಲ್ಯ ವಿವಾಹ, ಗ್ರಾಮ ದೇವತೆ ಹಬ್ಬದಲ್ಲಿ ಕೋಣನ ಬಲಿ ಮುಂತಾದ ಅನಿಷ್ಠ ಪದ್ದತಿಗಳ ವಿರುದ್ಧ ಗಟ್ಟಿ ಕಾನೂನು ಜಾರಿಯಾದರೆ ಜನರು ಹೆದರುತ್ತಾರೆ. ಇಲ್ಲದಿದ್ದರೆ ಹೆದರಿಕೆ ಇಲ್ಲದೆ ಆಚರಣೆಗಳು ಮುಂದುವರಿಯುತ್ತವೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಶೈಕ್ಷಣಿಕ ಅಭಿವೃದ್ಧಿ ಅಗತ್ಯ: ಶ್ರೀ
ಹೊಳಲ್ಕೆರೆ, ನ.30 ಸರ್ಕಾರವನ್ನು ಬಿಡುಗಾಸು ಕೇಳದೇ ರಸ್ತೆ ನಿರ್ಮಾಣ ಮಾಡಲು ಅನುಮತಿ ಕೇಳಿದರೂ ಸಹ ಒಂದು ವರ್ಷ ಸತಾಯಿಸಿ ನಂತರ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಒಪ್ಪಿಗೆ ನೀಡಿದ ಕಾರ್ಯವೈಖರಿ ಬಗ್ಗೆ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ತರಳಬಾಳು ನಗರದ (ಸಾಸಲು ಹಳ್ಳ ಮುತ್ತುಗದೂರು) ಅಯ್ಯಪ್ಪಸ್ವಾಮಿ ದೇವಸ್ಥಾನದ ಸೇವಾ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾಗಣಪತಿ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನಗಳ ಉದ್ಘಾಟನೆ, ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗ್ರಾಮಾಂತರ ಪ್ರದೇಶದಲ್ಲಿ ಸಾಮಾಜಿಕ ಸೇವೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು. ಸಚಿವ ಎಚ್. ಆಂಜನೇಯ ಜಿಪಂ ಅಧ್ಯಕ್ಷೆ ಇಂದಿರಾ ಕಿರಣ್, ಜಿಪಂ ಸದಸ್ಯರಾದ ಭಾರತಿ ಕಲ್ಲೇಶ್, ರಂಗಸ್ವಾಮಿ, .ಪಾರ್ವತಮ್ಮ ಇತರರು ಇದ್ದರು.
ಸಮರ್ಪಕ ವಿದ್ಯುತ್‌ಗೆ ಆಗ್ರಹ: ಗ್ರಾಮಸ್ಥರಿಂದ ಪ್ರತಿಭಟನೆ
ಚಿತ್ರದುರ್ಗ: ಬೆಸ್ಕಾಂನವರು ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಸದ ಕಾರಣ ಕತ್ತಲೆಯಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ಉದ್ಭವವಾಗಿದೆ ಎಂದು ತಾಲೂಕಿನ ಚಿಕ್ಕಬೆನ್ನೂರು ಗ್ರಾಪಂ ವ್ಯಾಪ್ತಿಯ ಬ್ಯಾಲಹಾಳ್ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.11 ತಿಂಗಳಿನಿಂದಲೂ ವಿದ್ಯುತ್ ಸಮಸ್ಯೆ ನಿವಾರಿಸುವಂತೆ ಮನವಿ ನೀಡುತ್ತಿದ್ದರೂ ಬೆಸ್ಕಾಂನವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ರಾತ್ರಿ ವೇಳೆಯಲ್ಲಿ ಸೀಮೆಎಣ್ಣೆ ದೀಪ ಇಲ್ಲವೇ ಮೇಣದ ಬತ್ತಿಯ ಬೆಳಕಿನಲ್ಲಿ ಓದುವಂತಹ ಹೀನಾಯ ಪರಿಸ್ಥಿತಿ ಬಂದೊದಗಿದೆ. ಕೃಷಿಗೆ ನೀರು ಹಾಯಿಸಬೇಕೆಂದರೆ ಮೋಟಾರ್ ಚಾಲನೆಯಾಗುವುದಿಲ್ಲ. ಜನ ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ. ಇನ್ನೂ ಅಲ್ಪಸ್ವಲ್ಪ ಬೆಳೆಗಳನ್ನಾದರೂ ರಕ್ಷಿಸಿಕೊಳ್ಳೋಣವೆಂದರೆ ಬೆಸ್ಕಾಂನವರು ಸಮರ್ಪಕ ವಿದ್ಯುತ್ ಪೂರೈಸಲು ಚೌಕಾಸಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಸ್ಕಾಂ ವಿರುದ್ಧ ಆಕ್ರೋಶ: ದಿನಕ್ಕೆ ಕೇವಲ ಮೂರ್ನಾಲ್ಕು ಗಂಟೆಯೂ ವಿದ್ಯುತ್ ನೀಡದ ಕಾರಣ ಇಡೀ ಗ್ರಾಮ ಲೋ ಓಲ್ಟೇಜ್‌ನಿಂದ ನಲುಗುವಂತಾಗಿದೆ ಎಂದು ಬ್ಯಾಲಹಾಳ್ ಗ್ರಾಮಸ್ಥರು ಬೆಸ್ಕಾಂ ವಿರುದ್ಧ ಕಿಡಿಕಾರಿದರು. ಹಲವಾರು ಬಾರಿ ಬೆಸ್ಕಾಂಗೆ ಹೋಗಿ ವಿದ್ಯುತ್ ಸಮಸ್ಯೆ ನಿವಾರಿಸುವಂತೆ ಕೋರಿಕೊಂಡರೂ ಅಲ್ಲಿನ ಸಿಬ್ಬಂದಿಗಳು ಕ್ಯಾರೆ ಅನ್ನುತ್ತಿಲ್ಲ ಎಂದು ಪ್ರತಿಭಟನಾ ನಿರತರು ಜಿಲ್ಲಾಡಳಿತಕ್ಕೆ ತಮ್ಮ ಕಷ್ಟಗಳನ್ನು ತೋಡಿಕೊಂಡರು.
ಬ್ಯಾಲಹಾಳ್ ಗ್ರಾಮದಲ್ಲಿ 1500 ರಿಂದ 2000 ಜನಸಂಖ್ಯೆಯಿದ್ದು, ಇದರಲ್ಲಿ 500 ರಿಂದ 600 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಭರಮಸಾಗರ, ಸಿರಿಗೆರೆ ಮತ್ತು ಚಿತ್ರದುರ್ಗಕ್ಕೆ ಹೋಗಬೇಕು. ಇದಕ್ಕಾಗಿ ಸರಿಯಾದ ರೀತಿಯಲ್ಲಿ ಬಸ್ಸಿನ ಸೌಕರ್ಯವಿಲ್ಲದೆ ನಡೆದು ಕೊಂಡು ಹೋಗುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ- ಕಾಲೇಜು ಬಿಟ್ಟ ನಂತರ ವಾಪಾಸ್ಸು ಮನೆಗೆ ಬರುವಾಗ ಕತ್ತಲಾಗುತ್ತಿದ್ದು, ಕಾಡು ಪ್ರಾಣಿಗಳ ಕಾಟವಿದೆ. ಅಲ್ಲದೆ ರಾತ್ರಿ ಸಮಯದಲ್ಲಿ ಓದಿಕೊಳ್ಳಲು ಸರಿಯಾದ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದೆ ವಿದ್ಯಾಭ್ಯಾಸಕ್ಕಾಗಿ ಅಡ್ಡಿಯುಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಿ.ಟಿ. ಶರಣ್‌ಕುಮಾರ್, ಎನ್. ರವಿಕುಮಾರ್, ತಿಪ್ಪೇಸ್ವಾಮಿ, ಮೋಹನ್, ಬಸವರಾಜ್, ಪಾಲಯ್ಯ, ಕುಮಾರ್, ಶರಣಪ್ಪ ಇನ್ನು ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಅವ್ಯವಹಾರ ತಡೆ ಲೋಕಾಕರ್ತವ್ಯ: ನಾಗರಾಜ್
ಶಿವಮೊಗ್ಗ: ಲಂಚ ಕೇಳುವ ಅಧಿಕಾರಿಗಳು, ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದ ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಅವ್ಯವಹಾರ ಮಾಡುವವರನ್ನು ಗುರುತಿಸಿ ಕಾನೂನು ಕ್ರಮಕೈಗೊಳ್ಳುವುದೇ ಲೋಕಾಯುಕ್ತ ಅಧಿಕಾರಿಗಳ ಕರ್ತವ್ಯ ಎಂದು ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಪಿ. ನಾಗರಾಜ್ ತಿಳಿಸಿದರು.
ಆಯನೂರಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಹಾರ್ನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿ ಅವರು, ಈ ಸಭೆ ನ್ಯಾಯಾಲಯದ ಕಲಾಪ ಇದ್ದಂತೆ. ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಹಾಗೂ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಯಾವ ರೀತಿಯ ತೊಂದರೆ ನೀಡುತ್ತಿದ್ದಾರೆ ಎಂಬುದರ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆಯುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ ಎಂದರು.
ವಸತಿ ಹಂಚಿಕೆ: ಅರ್ಹರಿಗೆ ಅನ್ಯಾಯವಾಗದಂತೆ ಕ್ರಮ
ಹೊನ್ನಾಳಿ: ತಾಲೂಕಿನಲ್ಲಿ ಬಸವ ವಸತಿ ಆಶ್ರಯ ಮನೆಗಳ ಹಂಚಿಕೆ ವಿಚಾರವಾಗಿ ಡಿಸೆಂಬರ್ 9ರಂದು ಎಲ್ಲಾ ಗ್ರಾಮಪಂಚಾಯಿತಿ ಅಧ್ಯಕ್ಷರು, ಪಿಡಿಓ ಹಾಗೂ ಕಾರ್ಯದರ್ಶಿಗಳ ಸಭೆ ಕರೆದು ಆರ್ಹಫಲಾನುಭವಿಗೆಳಿಗೆ ಪಕ್ಷಾತೀತವಾಗಿ ಮನೆಗಳ ಹಂಚಿಕೆ ವಿಚಾರವಾಗಿ ಕೂಲಂಕಷವಾಗಿ ಚರ್ಚಿಸಲಾಗುವುದು. ಯಾವೊಬ್ಬ ಆರ್ಹ ಫಲಾನುಭವಿಯೂ ಕೂಡ ಮನೆಯಿಂದ ವಂಚತರಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ಜಿ ಶಾಂತನಗೌಡ ಹೇಳಿದರು.
ಶನಿವಾರ ತಾಲೂಕಿನ ಚಿನ್ನಿಕಟ್ಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸಜೋಗ ಗ್ರಾಮದಲ್ಲಿ ನಬಾರ್ಡ್ .ಆರ್.ಐ.ಡಿ.ಎಫ್. -18ರ ಯೋಜನೆಯಡಿಯಲ್ಲಿ ಸುಮಾರು 75 ಲಕ್ಷರು ವೆಚ್ಚದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಡಿ ಗ್ರೂಪ್ ನೌಕರರೆಂದು ಪರಿಗಣಿಸಲು ಆಗ್ರಹ
ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಿ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಅವರ ಹುದ್ದೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಸ್.ಎಲ್. ರಾಧಾ ಸುಂದರೇಶ್, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ ತಿಂಗಳಿಗೆ 12,500 ವೇತನ ನೀಡಬೇಕು. ಹೆಚ್ಚುವರಿಯಾಗಿ ವರ್ಷಕ್ಕೆ 200 ನೀಡಬೇಕು. ಅಂಗನವಾಡಿ ಕೇಂದ್ರಗಳು ಸಂಜೆ 4 ಗಂಟೆಯವರೆಗೆ ನಡೆಸುತ್ತಿರುವುದರಿಂದ ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರದ ಪ್ರಮಾಣವನ್ನು ಹೆಚ್ಚಿಸಿ ಜೊತೆಗೆ ಸಮವಸ್ತ್ರ ನೀಡಬೇಕೆಂದರು.
ಲೋಕಸಭೆ ಚುನಾವಣೆಗೆ ಬಿಜೆಪಿ ತಾಲೀಮು
ಶಿವಮೊಗ್ಗ: ಬಿಜೆಪಿ-ಕೆಜೆಪಿ ವಿಲೀನ ಕುರಿತು ಚರ್ಚೆ ನಡೆವ ಹೊತ್ತಿನಲ್ಲೇ ಜಿಲ್ಲಾ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ಅಭ್ಯರ್ಥಿ ಕುರಿತಾಗಿ ಚರ್ಚೆ ನಡೆಸಿದೆ. ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಂಬರುವ ಚುನಾವಣೆ, ಅಭ್ಯರ್ಥಿ ಕುರಿತಂತೆ ಪಕ್ಷದ ಮುಖಂಡರು, ಪ್ರಮುಖ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, 2014ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಿದ್ಧತೆಯ ಬೀಜಾಂಕುರವಾಗುತ್ತಿದೆ. ವಿಶೇಷವಾಗಿ ಬಿಜೆಪಿ ಬೂತ್ ಮಟ್ಟದಲ್ಲಿ ಸಕಲ ತಯಾರಿ ನಡೆಸಿದೆ. ಪಿಎಂ ಅಭ್ಯರ್ಥಿ ಘೋಷಿಸಲಾಗಿದೆ ಎಂದು ಹೇಳಿದರು. ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲೂ ಸಿದ್ಧತೆ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು 1944 ಬೂತ್‌ಗಳು ಬರುತ್ತವೆಂದರು.
ಬತ್ತ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ: ವಡ್ನಾಳ್
ಚನ್ನಗಿರಿ: ತಾಲೂಕಿನಲ್ಲಿ ಬತ್ತ ಮತ್ತು ಮೆಕ್ಕೆಜೋಳದ ಖರೀದಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಶಾಸಕ ವಡ್ನಾಳ್ ರಾಜಣ್ಣ ಹೇಳಿದರು.
ಅವರು ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 29ಜನರಿಗೆ ಮತ್ತು ಕಾಲುಬಾಯಿ ಜ್ವರ ರೋಗ ಪೀಡಿಸಿ ಮರಣಿಸಿದ 3 ಜಾನುವಾರುಗಳ ಮಾಲಿಕರುಗಳಿಗೆ ಸೇರಿದಂತೆ 8.30ಲಕ್ಷ ರೂಪಾಯಿಗಳ ಚೆಕ್ಕುಗಳನ್ನು ವಿತರಿಸಿ ಮಾತನಾಡಿ, ಬೆಳಗಾವಿಯ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಸಲಾಗಿದೆ ಎಂದರು.
ಬೆಂಬಲ ಬೆಲೆ: ಮೆಕ್ಕೆಜೋಳದ ಖರೀದಿ ಕೇಂದ್ರವನ್ನು ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಆರಂಭಿಸಿದ್ದು, ಭತ್ತಕ್ಕೆ ಬೆಂಬಲ ಬೆಲೆಯಾಗಿ ಪ್ರತಿ ಕ್ವಿಂಟಾಲ್‌ಗೆ 1600ರಂತೆ ಹಾಗೂ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಯಾಗಿ 1300ರೂಪಾಯಿಯಂತೆ ಖರೀದಿಸಲು ತೀರ್ಮಾನಿಸಲಾಗಿದೆ ಎಂದರು.
ಆತ್ಮ ಸ್ಥೈರ್ಯತುಂಬವ
ಕೆಲಸ ಮಾಡಲಿಲ್ಲ: ಟೀಕೆ
ಶಿವಮೊಗ್ಗ: ಬೆಳಗಾವಿಯಲ್ಲಿ ರೈತನ ಆತ್ಮಹತ್ಯೆ ನಡೆದರೂ ಸಹ ರೈತ ಸಮುದಾಯದ ಆತ್ಮಸ್ಥೈರ್ಯ ತುಂಬುವ ಒಂದೇ ಒಂದು ಮಾತು ಸರ್ಕಾರದ ಕಡೆಯಿಂದ ಬರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರೂ ಮುಖ್ಯಮಂತ್ರಿಯವರಿಂದ ಪಶ್ಚಾತ್ತಾಪದ ಮಾತೂ ಹೊರಡಲಿಲ್ಲ. ಈ ಬೆಳವಣಿಗೆ ಬೇಸರ ತರಿಸುತ್ತದೆ ಎಂದು ಹೇಳಿದರು. ಬೆಳಗಾವಿ ಅಧಿವೇಶನದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಜನ ಸಾಮಾನ್ಯರ ಸಮಸ್ಯೆಗಳ ಕುರಿತು ಚರ್ಚೆ ನಡೆದು ಅದಕ್ಕೆ ಸೂಕ್ತ ಪರಿಹಾರ ದೊರೆಯುವ ವಿಶ್ವಾಸವಿತ್ತು. ಆದರೆ, ಅಲ್ಲಿ ನಡೆಯುತ್ತಿರುವುದೇ ಬೇರೆ ಎಂದು ಬೇಸರಿಸಿದರು.
ಎಲ್ಲ ಇಲಾಖೆ ಅವ್ಯವಹಾರ ತನಿಖೆಯಾಗಬೇಕು: ತಿಪ್ಪಾರೆಡ್ಡಿ
ಚಿತ್ರದುರ್ಗ, ನ. 30: ಜಿಲ್ಲಾ ಪಂಚಾಯಿತಿ ಅಲ್ಲದೇ ಬೇರೆ ಯಾವುದೇ ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದರೆ ಅದರ ಬಗೆಗೂ ತನಿಖೆಯಾಗಲೇಬೇಕು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆಗ್ರಹಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸದೆ ದುರುಪಯೋಗ ಮಾಡಿಕೊಳ್ಳಲಾಗಿದೆ. ಇದಲ್ಲದೇ, ಯೋಜನೆಯಲ್ಲಿ ಖರೀದಿಸಲಾದ ಉಪಕರಣಗಳು ಬೇಗನೇ ಹಾಳಾಗಿದ್ದು, ಇವು ಕಳಪೆ ವಸ್ತು ಎಂದು ಗೊತ್ತಾಗುತ್ತದೆ. ಇದರ ಬಗ್ಗೆ ತನಿಖೆ ಅಗತ್ಯವಾಗಿದೆ ಎಂದರು. ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅಲ್ಲದೇ ರಾಜ್ಯದಲ್ಲಿಯೂ ಸಹಾ ಪಕ್ಷ ಅಧಿಕಾರದಲ್ಲಿದ್ದು, ಮಂತ್ರಿಗಳು ಜಿಲ್ಲಾ ಉಸ್ತುವಾರಿ ವಹಿಸಿದ್ದಾರೆ. ಇದರಿಂದ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಪಂಚಾಯಿತಿ ಸದಸ್ಯರು ಈಗಾಗಲೇ ಈ ಪ್ರಕರಣದ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಅವರು ಏನು ಮಾಡುತ್ತಾರೆ ನೋಡಲಾಗುವುದು ಎಂದರು.
ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಒತ್ತಾಯ
ಶಿವಮೊಗ್ಗ: ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥಿತವಾದ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಹೇಮಾ ಪಾವನಿ ಅವರು ಹೇಳಿದರು. ಅವರು ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಹಾಗೂ ಮುರುಘರಾಜೇಂದ್ರ ಸಂಸ್ಥಾನ ಮಠ ಸಂಯುಕ್ತಾಶ್ರಯದಲ್ಲಿ ಆನಂದಪುರದ ಮುರುಘಾಮಠದ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಉದ್ಯಮಿಗಳು, ಸ್ತ್ರೀಶಕ್ತಿ- ಸ್ವಸಹಾಯ ಗುಂಪುಗಳ ಮಹಿಳಾ ಉದ್ದಿಮೆದಾರರುಗಳು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಂಘಗಳ ಸದಸ್ಯರು ತಮ್ಮ ಸಂಘಗಳಲ್ಲಿ ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಬರುವ ಲಾಭದಿಂದ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.
ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ
ಶಿವಮೊಗ್ಗ, ನ.30 ವಿರೋಧ ಪಕ್ಷದ ನಾಯಕರು ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ವಹಿಸಬೇಕು. ಅಪ್ರಬುದ್ಧರಾಗಿ, ಬಾಲಿಷರಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತಾಡಿದ ಅವರು, ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ತಾಲೂಕಿನಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಜ್ಞಾನೇಂದ್ರ ಹೆಸರು ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದರು. ಸೊರಬ ಶಾಸಕ ಮಧು ಬಂಗಾರಪ್ಪ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇವರಿಗೆ ಕುಮಾರ್ ಬಂಗಾರಪ್ಪ ಅವರನ್ನು ಟೀಕಿಸುವ ಯಾವ ಅರ್ಹತೆಯೂ ಇಲ್ಲ ಎಂದಿದ್ದಾರೆ.
'ಅಕ್ಕ' ಕನ್ನಡ ಧಾರಾವಾಹಿಗೆ ಈಗ ಕೋರ್ಟಿನ ಕಡಿವಾಣ
ಇದೇ ಸೋಮವಾರ ಡಿಸೆಂಬರ್ ಎರಡರಿಂದ ರಾತ್ರಿ ಎಂಟೂವರೆಗೆ ಈಟೀವಿಯಲ್ಲಿ ಪ್ರಸಾರವಾಗಬೇಕಿದ್ದ ಅಕ್ಕ ಕನ್ನಡ ಧಾರಾವಾಹಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಖ್ಯಾತ ಲೇಖಕಿ ಹಾಗೂ ಕಿರುತೆರೆ ನಿರ್ಮಾಪಕಿ-ನಿರ್ದೇಶಕಿ ರೇಖಾರಾಣಿ ಅವರ ಕಣ್ಮಣಿ ಎಂಬ ಕತೆಯನ್ನು ಕದ್ದು ಅಕ್ಕ ಧಾರಾವಾಹಿ ನಿರ್ಮಿಸಲಾಗಿದೆ ಎಂದು ನೀಡಲಾಗಿದ್ದ ದೂರನ್ನು ಪರಿಶೀಲಿಸಿದ ಸಿವಿಲ್‌ಕೋರ್ಟ್ ನಂ.10ರ ನ್ಯಾಯಾಧೀಶರು ಶುಕ್ರವಾರ ಅಕ್ಕ ಧಾರಾವಾಹಿಗೆ ತಡೆಯಾಜ್ಞೆ ನೀಡಿದ್ದಾರೆ. ಮುಂದಿನ ವಿಚಾರಣೆ ನಡೆದು ವಿವಾದ ಇತ್ಯರ್ಥ ಆಗುವವರೆಗೆ ಧಾರಾವಾಹಿಯು ಪ್ರಸಾರವಾಗುವಂತಿಲ್ಲ ಎಂದು ಕೋರ್ಟು ಆದೇಶ ನೀಡಿದೆ. ಇದು ತಮ್ಮದೇ ಕತೆಯ ಕೃತಿಚೌರ್ಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿಕೆ ನೀಡಿರುವ ರೇಖಾ ರಾಣಿ ಇದಕ್ಕೆ ನೇರ ಕಾರಣ ಪ್ರಸ್ತುತ ಚಾನಲ್‌ನ ಧಾರಾವಾಹಿ ವಿಭಾಗದ ಮುಖ್ಯಸ್ಥರು ಎಂದು ಆರೋಪ ಹೊರಿಸಿದ್ದಾರೆ.
ಬ್ಯಾಂಕಾಕ್‌ನಲ್ಲಿ 'ನಿನ್ನಿಂದಲೇ' ಚಿತ್ರದ ಶೂಟಿಂಗ್ ಬ್ಯಾನ್
ಪುನೀತ್ ರಾಜ್‌ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಶೂಟಿಂಗಿಗೆ ವಿಘ್ನ. ಆದರೆ ಹಾಗಂತ ಅದು ಶಾಶ್ವತ ವಿಘ್ನ ಅಲ್ಲ ಬಿಡಿ. ಅದೇನಿದ್ದರೂ ಕೇವಲ 'ಎಮರ್ಜೆನ್ಸಿ' ವಿಘ್ನ. ಬ್ಯಾಂಕಾಕ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ನಿನ್ನಿಂದಲೇ ಚಿತ್ರತಂಡ ಯೋಜನೆ ಮಾಡಿತ್ತು. ಅದರಂತೆ ಶೂಟಿಂಗ್ ಕೂಡ ಎರಡು ದಿನದ ಹಿಂದೆ ಶುರುವಾಗಿತ್ತು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಬ್ಯಾಂಕಾಕ್ ನಗರದಲ್ಲಿ ರಾಜಕೀಯ ಕಾರಣಗಳಿಗಾಗಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಚಿತ್ರೀಕರಣಕ್ಕೆ ಯಾವ ತೊಂದರೆ ಇಲ್ಲದಿದ್ದರೂ ಸಾರ್ವಜನಿಕ ಸಭೆಗಳು, ಮೆರವಣಿಗೆಗಳ ಕಾರಣ ಚಿತ್ರೀಕರಣ ನಡೆಸುವುದು ಸುಲಭವಾಗಿರಲಿಲ್ಲ. ಈ ಕಾರಣಕ್ಕಾಗಿ ನಿನ್ನಿಂದಲೇ ಚಿತ್ರತಂಡ ಎರಡು ದಿನಗಳ ಕಾಲ ಶೂಟಿಂಗ್ ನಿಲ್ಲಿಸಬೇಕಾಗಿತ್ತು. ಅದರಂತೆ ಎರಡು ದಿನಗಳ ಬ್ರೇಕ್‌ನ ನಂತರ ಈಗ ಮತ್ತೆ ನಿನ್ನಿಂದಲೇ ಶುರುವಾಗಿದೆ.