ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶತಮಾನ ಕಂಡರೂ ಸೌಲಭ್ಯ ವಂಚಿತ ಶಾಲೆ

Vishwanath S
Updated On : 1 Dec 2013, 12:54 pm

ಹೊಸನಗರ: ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದ ಆ ದಿನಗಳಲ್ಲೇ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಪ್ರಾರಂಭಗೊಂಡ ಕನ್ನಡ ಮಾಧ್ಯಮದ ಈ ಸರ್ಕಾರಿ ಶಾಲೆ ಈಗ ನೂರರ ಸಂಭ್ರಮದಲ್ಲಿದೆ. ಆದರೆ, ರಾಜ್ಯದ ಈ ಅಪರೂಪದ ಶಾಲೆ ಪೂರಕ ಸೌಲಭ್ಯಗಳಿಂದ ವಂಚಿತವಾಗಿದೆ.
ಇದು ಐತಿಹಾಸಿಕ ಬಿದನೂರು ಕೋಟೆಯ ತಪ್ಪಲಿನಲ್ಲಿರುವ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಸ್ಥಿತಿ. ಪ್ರಸ್ತುತ ಇದು ಈಗಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರರವರ ತವರು ಕ್ಷೇತ್ರಕ್ಕೆ ಸೇರಿದ್ದು. ಈ ಹಿನ್ನೆಲೆಯಲ್ಲಿ, ಈ ಶಾಲೆ ತನ್ನ ಅಭಿವೃದ್ಧಿಗಾಗಿ ಒಂದಷ್ಟು ಆಶಾಭಾವನೆಯನ್ನು ಹೊತ್ತಿದೆ.
ಕೊರತೆ: ಕಿಷ್ಕಿಂಧೆಯಂಥ ಜಾಗದಲ್ಲಿ ಮೈದಳೆದ ಈ ಶಾಲೆಯಲ್ಲಿ ಕಲಿತ ಸಾವಿರಾರು ಹೆಣ್ಣುಮಕ್ಕಳು ಇಂದು ವಿವಿಧ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಇಂಥ ಶಾಲೆಗಿರುವ ಪ್ರಮುಖ ಸಮಸ್ಯೆಯೆಂದರೆ, ಜಾಗದ ಕೊರತೆ. ಮೈದಾನವಿಲ್ಲದೆ ಹೆಣ್ಣುಮಕ್ಕಳ ಆಟಕ್ಕೆ ಅವಕಾಶವಿಲ್ಲ. ಆಡಲೇ ಬೇಕೆಂದರೆ ದೂರದ ನಗರ ಹೈಸ್ಕೂಲು ಮೈದಾನಕ್ಕೆ ಮೊರೆ ಹೋಗಬೇಕು.
ಶಾಲೆಗೆ ಸ್ವಂತ ಕುಡಿಯುವ ನೀರಿನ ಬಾವಿ ಇಲ್ಲ. ಕಂಪ್ಯೂಟರ್ ಶಿಕ್ಷಣ ಎನ್ನುವುದು ದೂರದ ಮಾತು. ಹಾಗಂತ ಮಕ್ಕಳ ಹಾಜರಾತಿಗೆ ಕೊರತೆಯಿಲ್ಲ. 1ರಿಂದ 7ರವರೆಗೆ ಇಲ್ಲಿ ಶಿಕ್ಷಣ ದೊರೆಯುತ್ತಿದ್ದು ಪ್ರಸಕ್ತ 78 ಹೆಣ್ಣುಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಕಟ್ಟಡದ ಚಿಕ್ಕದಾಗಿದ್ದು ಹೆಚ್ಚುವರಿ ಕೊಠಡಿಗಳು ಕೊರತೆ ಹೆಚ್ಚು ಬಾಧಿಸುತ್ತಿದೆ.
ವಿದ್ಯಾದೇಗುಲ: 1893ರಲ್ಲಿ ಅಂದಿನ ಮಹಿಳಾ ಸಮಾಜದ ಒತ್ತಾಯದ ಮೇರೆಗೆ ನಿರ್ಮಾಣಗೊಂಡ ಕಟ್ಟಡದ ಮಾದರಿ ಎಂತವರಲ್ಲು ಗೌರವ ತರಿಸುತ್ತದೆ. ಮಾತ್ರವಲ್ಲ, 100 ವರ್ಷ ದಾಟಿದರೂ ಕೂಡ ಕಟ್ಟಡ ಇನ್ನು ಗಟ್ಟುಮುಟ್ಟಾಗಿ ಇದೆ. ಕಟ್ಟಡವನ್ನು ಹಾಗೆ ಸಂರಕ್ಷಿಸಬೇಕು ಎಂಬ ಮಹದಾಸೆ ಕೂಡ ಸ್ಥಳೀಯರಲ್ಲಿದೆ.
ಹೆಣ್ಣುಮಕ್ಕಳಿಗೆ ಸೀಮಿತವಾಗಿ ಶತಮಾನ ಆಚರಿಸಿಕೊಂಡ ಈ ಕನ್ನಡ ಮಾಧ್ಯಮದ ಶಾಲೆಗೆ ಪೂರಕ ಸೌಲಭ್ಯ ಅಗತ್ಯವಾಗಿ ಬೇಕು. ಉತ್ತಮ ಶಿಕ್ಷಣದ ನಿಟ್ಟಿನಲ್ಲಿ ಸ್ಥಳೀಯರೆ ಆದ ಶಿಕ್ಷಣ ಸಚಿವರು ಗಮನ ಹರಿಸಲಿ ಎಂಬ ಒತ್ತಾಯ ಕೇಳಿ ಬರುತ್ತಿದೆ.


-ರವಿ ಬಿದನೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement