ಎನ್. ಹರಿಕುಮಾರ್ ದಂಪತಿಗೆ ಸನ್ಮಾನ
ಭದ್ರಾವತಿ: ಶಿವಮೊಗ್ಗ ಜಿಲ್ಲೆಯಲ್ಲಿ ರಂಗಾಸಕ್ತರು ಮತ್ತು ರಂಗಕಲಾವಿದರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಇದೀಗ ಬೆಂಗಳೂರಿಗೆ ವರ್ಗವಾಗಿರುವ ಎನ್. ಹರಿಕುಮಾರ್ ತಿಳಿಸಿದರು.
ಭಾನುವಾರ ಪಟ್ಟಣದ ಎಂಪಿಎಂ ಅತಿಥಿಗೃಹದಲ್ಲಿ ಪಟ್ಟಣದ ವಿಕಸಂ, ನವೋದಯ ಕಲಾಸಂಘ, ಎಂಪಿಎ ಲಲಿತ ಕಲಾಸಂಘ, ಶಾಂತಲಾ ಕಲಾವೇದಿಕೆ, ಅಪೇಕ್ಷ ನೃತ್ಯ ಕಲಾವಿದರು ಹಾಗೂ ಗುರು ಬ್ರದರ್ಸ್ ಆರ್ಟ್ಸ್ ತಂಡಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎಲ್ಲರ ಸಹಕಾರ ಮತ್ತು ಮಾರ್ಗದರ್ಶನದಿಂದ ತಾವು 12 ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಾಶ್ರೀ ಎಸ್. ಶಾಮಮೂರ್ತಿ ಹಿಂದೊಮ್ಮೆ ರಂಗಕಲೆಗೆ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡೂ ಕಾರ್ಖಾನೆಗಳು ಅತಿಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದುದನ್ನು ನೆನಪು ಮಾಡಿಕೊಳ್ಳುತ್ತಾ ಪ್ರಸ್ತುತ ಪರಿಸ್ಥಿತಿಯಲ್ಲಿ ರಂಗಕಲೆಗೆ ಪ್ರೋತ್ಸಾಹ ಕಡಮೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಹರಿಕುಮಾರ್ ದಂಪತಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎನ್.ಕೆ. ಶಂಕರಪ್ಪ, ಸುರೇಶ್‌ಕುಮಾರ್, ಡಾ. ಜಿ.ಎಂ.ನಟರಾಜ್, ಜಿ.ವಿ. ಸಂಗಮೇಶ್ವರ್, ಅಪೇಕ್ಷ ಮಂಜುನಾಥ್ ಮೊದಲಾದವರಿದ್ದರು. ರೇವಣಸಿದ್ದಪ್ಪ ಸ್ವಾಗತಿಸಿದರು. ಸಿ. ಲಕ್ಷ್ಮಿನಾರಾಯಣಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್.ಜಿ. ಶಂಕರಮೂರ್ತಿ ವಂದಿಸಿದರು.