ಜನತೆ ಜಾಗೃತರಾದರೆ ಭ್ರಷ್ಟಾಚಾರ ನಿರ್ಮೂಲನೆ
ದಾವಣಗೆರೆ: ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಕೇವಲ ಒಬ್ಬ ವ್ಯಕ್ತಿಯಿಂದ ಹೋಗಲಾಡಿಸಲು ಸಾಧ್ಯವಿಲ್ಲ. ಸಮಸ್ತ ಜನತೆ ಜಾಗೃತರಾಗುವ ಮೂಲಕ ಭ್ರಷ್ಟಾಚಾರದ ಪಿಡುಗಿನ ನಿವಾರಣೆಗೆ ಮುನ್ನುಡಿ ಬರೆಯಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಕರೆ ನೀಡಿದರು.
ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾನುವಾರ ಜಿಲ್ಲಾ ಆಟೋ ರಿಕ್ಷಾ ಚಾಲಕರ ಯೂನಿಯನ್, ಸಿಐಟಿಯು, ಎಫ್ಕೆ ಎಆರ್ಡಿಯು ಹಾಗೂ ಎಐಆರ್ಟಿಡಬ್ಲ್ಯುಎಫ್ನಿಂದ ಏರ್ಪಡಿಸಿದ್ದ ಆಟೋ ರಿಕ್ಷಾ ಚಾಲಕರ ಯೂನಿಯನ್ನ ತಾಲೂಕು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ಸಂಪೂರ್ಣ ನಿಯಂತ್ರಿಸುವ ಶಕ್ತಿ ಸಮಸ್ತ ಜನತೆಯಲ್ಲಿದೆ. ಇಂದು ಪ್ರಾಮಾಣಿಕರನ್ನೂ ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಮತ್ತೊಂದು ಅವಕಾಶ ನೀಡಿ: ಸಂಸದನಾದ ನಂತರ ನನ್ನ ಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುವ ಹಂಬಲ ನನ್ನದು. ಅಂತಹ ಅವಕಾಶವನ್ನು ಜಿಲ್ಲೆಯ ಮತದಾರರು ಮತ್ತೆ ನನಗೆ ನೀಡಲಿ ಎಂದು ಮನವಿ ಮಾಡಿದರು.
ಧ್ವನಿ ಎತ್ತಬೇಕಿದೆ: ಕೇವಲ ಆಟೋ ರಿಕ್ಷಾ ಚಾಲಕರಷ್ಟೇ ಅಲ್ಲ, ಎಲ್ಲಾ ರೀತಿಯ ವಾಹನ ಚಾಲಕರು, ಡಿ ದರ್ಜೆ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರೂ ಸೇರಿದಂತೆ ಅಸಂಘಟಿತ ವಲಯಕ್ಕೆ ಮೂಲ ಸೌಲಭ್ಯ ಸಿಗುತ್ತಿಲ್ಲ. ಇನ್ನಾದರೂ ಸರ್ಕಾರಗಳು ದುಡಿಯುವ ವರ್ಗಕ್ಕೆ ಸಿಗಬೇಕಾದ ಸೌಲಭ್ಯ, ಹಕ್ಕುಗಳನ್ನು ನೀಡಬೇಕು. ಶ್ರಮಿಕ ವರ್ಗ ಸಂಘಟಿತವಾಗುವ ಮೂಲಕ ಸೌಲಭ್ಯ ಪಡೆಯಲು ಧ್ವನಿ ಎತ್ತಬೇಕು ಎಂದು ತಿಳಿಸಿದರು.
ಸಮ್ಮೇಳನ ಉದ್ಘಾಟಿಸಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿ, ಸರ್ಕಾರಗಳಿಗೆ ಜನ, ಬಡವರು, ಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲದಂತಹ ಆಡಳಿತ ನೀಡುತ್ತಿವೆ. ನಾಡಿನ ಜನತೆ ತೆರಿಗೆ ರೂಪದಲ್ಲಿ ಕಟ್ಟುವ ಹಣದಿಂದಲೇ ನಡೆಯುವ ಸರ್ಕಾರಗಳು ಜನಹಿತವನ್ನೇ ಮರೆತಿವೆ. ಜನ ಸಾಮಾನ್ಯರು, ಬಡವರು, ಶ್ರಮಿಕರು ತೆರಿಗೆ ಕಳ್ಳತನ ಮಾಡುತ್ತಿಲ್ಲ. ಕಳ್ಳತನ ಮಾಡುತ್ತಿರುವುದು ಕೇಂದ್ರ, ರಾಜ್ಯ ಸರ್ಕಾರಗಳು ಎಂದು ಆರೋಪಿಸಿದರು.
ದೈನಂದಿನ ಬದುಕಿನಲ್ಲಿ ವಾಹನ ಚಾಲಕರು ಬಳಸುವ ಎಲ್ಲಾ ವಾಹನಗಳಿಂದ ಇಂಧನಗಳನ್ನು ತುಂಬಿಸಿಕೊಳ್ಳುವಾಗಲೇ ರಸ್ತೆ ಅಭಿವೃದ್ಧಿಗೆಂದು ತೆರಿಗೆ ರೂಪದಲ್ಲಿ 2 ಗಳನ್ನು ಪಡೆಯಲಾಗುತ್ತಿದೆ. ವಾಸ್ತವ ಹೀಗಿದ್ದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕ ವಸೂಲಿ ಕೇಂದ್ರ ಸ್ಥಾಪಿಸುವ ಮೂಲಕ ಸರ್ಕಾರ ಜನರ ಹಗಲು ದರೋಡೆ ಮಾಡುತ್ತಿವೆ. ಸುಂಕ ವಸೂಲಿ ಕೇಂದ್ರ ತಕ್ಷಣವೇ ರದ್ದುಪಡಿಸಲಿ ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಲಕ್ಷ್ಮಿನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಮಹಮ್ಮದ್ ಖಾದಿರ್, ಕಾರ್ಮಿಕ ಇಲಾಖೆಯ ಅಧಿಕಾರಿ ವೇಮಣ್ಣ, ಎಆರ್ಡಿಯು ಅಧ್ಯಕ್ಷ ಬಿ. ವಿನಯಕುಮಾರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ರಾಘವೇಂದ್ರ, ಜೆ.ಬಿ. ನಾಗರಾಜ, ಅನ್ವರಸಾಬ್, ಚಂದ್ರಪ್ಪ, ಎಸ್.ಕೆ. ಮುಕುಂದಪ್ಪ, ಅಣ್ಣಪ್ಪ, ಶ್ರೀನಿವಾಸ ರಿತ್ತಿ, ದಾದಾಪೀರ್, ರವಿಕುಮಾರ ಇತರರು ಇದ್ದರು. ಇದಕ್ಕೂ ಮುನ್ನ ನಗರದ ಜಯದೇವ ವೃತ್ತದಿಂದ ಸಮಾವೇಶ ಸ್ಥಳದವರೆಗೆ ಆಟೋ ರಿಕ್ಷಾ ಚಾಲಕರ ಮೆರವಣಿಗೆ ನಡೆಯಿತು.