ಪೊಲೀಸ್ ವರ್ಗಾವಣೆ: ಸ್ಥಳೀಯರ ತಲ್ಲಣ
ಶಿವಮೊಗ್ಗ, ಸೆ.1: ನಕ್ಸಲ್ ಪೀಡಿತ ಆಗುಂಬೆ ವ್ಯಾಪ್ತಿಯ ಬಹುತೇಕ ಜನರಲ್ಲೊಂದು ತಲ್ಲಣ ಆರಂಭವಾಗಿದೆ. ಇದಕ್ಕೆ ಕಾರಣವಾಗಿರುವುದು ಪೊಲೀಸ್ ಸಿಬ್ಬಂದಿಯ ಸಾರಾಸಗಟು ಬದಲಾವಣೆ.
ಪೊಲೀಸ್ ಇಲಾಖೆಯ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗುಂಬೆ ಪೊಲೀಸ್ ಠಾಣೆ ಸಿಬ್ಬಂದಿಯನ್ನೂ ಬದಲಿಸಲಾಗಿದೆ. ಇಬ್ಬರು ಸಿಬ್ಬಂದಿ ನಿವೃತ್ತರಾಗುತ್ತಿರುವವರೂ ಸೇರಿದಂತೆ ಒಟ್ಟು 12 ಮಂದಿ ನಕ್ಸಲ್ ಪೀಡಿತ ಪ್ರದೇಶದ ಬಗ್ಗೆ ಮಾಹಿತಿ ಅರಿತ ಸಿಬ್ಬಂದಿ ಸೇವೆ ಇನ್ನು ಈ ಠಾಣೆಗಿರುವುದಿಲ್ಲ. ಬದಲಾಗಿ ಹೊಸ ಸಿಬ್ಬಂದಿ ಇಲ್ಲಿಗೆ ಬರುತ್ತಿದ್ದಾರೆ.
8 ಮಂದಿ ವರ್ಗ: ಇಲಾಖೆ ಮಾಹಿತಿಯಂತೆ 8 ಮಂದಿ ಪೊಲೀಸ್ ಕಾನ್‌ಸ್ಟೆಬಲ್‌ಗಳು, ಇಬ್ಬರು ಸಬ್‌ಇನ್‌ಸ್ಪೆಕ್ಟರ್‌ಗಳು ವರ್ಗವಾಗಿದ್ದಾರೆ. ಇವರೊಂದಿಗೆ ಒಬ್ಬರು ಎಎಸ್‌ಐ ಮತ್ತು ಹೆಡ್ ಕಾನ್‌ಸ್ಟೆಬಲ್ ಸೇವೆಯಿಂದ ನಿವೃತ್ತರಾಗಿದ್ದಾರೆ. ಈ ಬೆಳವಣಿಗೆ 22 ನಕ್ಸಲ್ ಪೀಡಿತ ಕುಗ್ರಾಮಗಳನ್ನೊಳಗೊಂಡ ಆಗುಂಬೆ ವ್ಯಾಪ್ತಿಯ ಬಹು ಜನರಿಗೆ ಪಥ್ಯವಾಗುತ್ತಿಲ್ಲ.
ಹೀಗಾಗಿಯೇ 40-50 ಸಂಖ್ಯೆಯಲ್ಲಿ ಗ್ರಾಮಸ್ಥರು ಶನಿವಾರ ಸಂಜೆಯಿಂದ ಆಗುಂಬೆ ಠಾಣೆಗೆ ಎಡತಾಕುತ್ತಿದ್ದಾರೆ. ಕೆಲವರು ಕಣ್ಣೀರಿಟ್ಟ ಪ್ರಸಂಗವೂ ನಡೆದಿದೆ. ಇಷ್ಟೇ ಅಲ್ಲದೇ, ಐಜಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿದ್ದು, ವರ್ಗಾವಣೆ ಕೈಬಿಡುವಂತೆ ಗೋಗರೆಯುತ್ತಿದ್ದಾರೆ.
ಭಾವುಕತೆ: ಮೂಲ ಸೌಕರ್ಯ ಕೊರತೆಯಿಂದ ಕಂಗೆಟ್ಟಿದ್ದ ಆಗುಂಬೆ ಭಾಗದ ಕುಗ್ರಾಮಗಳಿಗೆ ಒಂದು ಕಾಲದಲ್ಲಿ ಆಸರೆಯಾಗಿದ್ದು ನಕ್ಸಲರು. ನಕ್ಸಲರ ಓಡಾಟ ಹೆಚ್ಚಾಗುತ್ತಿದ್ದಂತೆ ಸರ್ಕಾರ ಕೂಡ ಇತ್ತ ಗಮನ ಹರಿಸಿ ಪ್ಯಾಕೇಜ್ ಬಿಡುಗಡೆ ಮಾಡಿ ಅಭಿವೃದ್ಧಿಯತ್ತ ಚಿಂತನೆ ಹರಿಸಿತು, ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಸಭೆ ಕೂಡ ಪ್ರತಿ ತಿಂಗಳು ನಡೆಯಲಾರಂಭಿಸಿತು.
ಈ ನಡುವೆಯೇ ಆಗುಂಬೆ ಠಾಣೆಯ ಸಿಬ್ಬಂದಿಯ ಕಾರ್ಯವೈಖರಿ, ಗುಪ್ತಚರ ಮಾಹಿತಿ ಸಂಗ್ರಹ ಚಟುವಟಿಕೆ ಕಾರ್ಯ ಬೆಂಗಳೂರಿನಲ್ಲಿ ಸದ್ದು ಮಾಡಿತು. ಜನರೊಂದಿಗೆ ಒಡನಾಟ, ಸೌಲಭ್ಯ ಕಲ್ಪಿಸಲು ತೆಗೆದುಕೊಂಡ ಕಾಳಜಿ ಗಮನಸೆಳೆಯಿತು.
ನಿರಂತರ ಸಂಪರ್ಕ: ನಕ್ಸಲ್ ಪೀಡಿತ ಪ್ರದೇಶದ ಜನರೊಂದಿಗೆ ನಿರಂತರ ಸಂಪರ್ಕ, ಆ ಭಾಗದ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವುದು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಕ್ಕೆ ಒತ್ತು ಕೊಟ್ಟಿದ್ದು, ಆರೋಗ್ಯ ಶಿಬಿರ ನಡೆಸಿದ್ದು, ಸ್ಥಳೀಯ ಯುವಕರೊಂದಿಗೆ ಆಟೋಟ ಸ್ಪರ್ಧೆ ಆಯೋಜಿಸಿದ್ದು, ಸ್ಥಳೀಯ ಜನರಲ್ಲಿ ಹೊಸ ಭಾವನೆ ಹುಟ್ಟುಹಾಕಲು ಕಾರಣವಾಗಿತ್ತು.
ನಕ್ಸಲ್ ಸಂಪರ್ಕದಲ್ಲಿದ್ದ ಅನೇಕ ಯುವಕರು ಮನಸ್ಸು ಬದಲಿಸಿದ್ದರು. ಪೊಲೀಸರ ಮಾಹಿತಿ ದಾರರಾಗಿಯೂ ಬದಲಾಗಿಬಿಟ್ಟರು.
ಸ್ಥಳೀಯರಿಗೆ ತಲ್ಲಣ: ಆದರೆ, ಇದೀಗ ಪ್ರಮುಖ ಸಿಬ್ಬಂದಿ ಬದಲಾವಣೆ ಸ್ಥಳೀಯ ಜನರ ತಲ್ಲಣಕ್ಕೆ ಕಾರಣವಾಗಿದೆ. ಪೊಲೀಸರ ನಿರಂತರ ಸಂಪರ್ಕದಲ್ಲಿದ್ದ ಹಳ್ಳಿ ಹೈದರು ಇದೀಗ ಮುಂದೇನು ಎಂದು ಚಿಂತಾಕ್ರಾಂತರಾಗಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿದ ವೆಂಕಟೇಶ್ (ಹೆಸರು ಬದಲಿಸಲಾಗಿದೆ), ನಾನು ಈ ಮುಂಚೆ ನಕ್ಸಲರಿಗೆ ಸಹಕಾರ ನೀಡಿದ್ದಿದೆ. ಅವರು ನಮ್ಮ ಬೇಡಿಕೆಗಳಿಗೆ ದನಿಯಾಗಿದ್ದರು.
ನಂತರ ನಡೆದ ಬೆಳವಣಿಗೆಯಲ್ಲಿ ನಾವು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ಇಷ್ಟಪಟ್ಟೆವು. ನಕ್ಸಲರಿಂದ ದೂರಾದೆವು. ಪೊಲೀಸರು ಎಲ್ಲಾ ರೀತಿಯ ಸಹಕಾರ ನೀಡಿದರು, ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿಕೊಟ್ಟರು. ಇದೀಗ ಇಂತಹ ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸಿದರೆ ಪರಿಸ್ಥಿತಿ ಏನಾಗಬಹುದು ಎಂದು ನೀವೇ ಊಹಿಸಿ ಎಂದು ಪ್ರಶ್ನಿಸಿದರು.
ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಮತ್ತು ಕಾನೂನು ಸುವ್ಯವಸ್ಥೆ ಸಬ್ ಇನ್‌ಸ್ಪೆಕ್ಟರ್ ಇಬ್ಬರೂ ವರ್ಗಾವಣೆಯಾಗಿರುವುದು ಸ್ಥಳೀಯ ಅಸಮಾಧಾನಕ್ಕೆ ಕಾರಣವಾಗಿದೆ.
ಹತೋಟಿ ತಪ್ಪುವ ಸಾಧ್ಯತೆ: ಗ್ರಾಮಸ್ಥರು ಹೇಳುವಂತೆ, 10 ಸಿಬ್ಬಂದಿ ವರ್ಗಾವಣೆ ಹಾಗೂ ಇಬ್ಬರು ಸಿಬ್ಬಂದಿ ನಿವೃತ್ತಿ ಆಗುಂಬೆ ಮೇಲೆ ಪೊಲೀಸ ಹತೋಟಿ ತಪ್ಪುವ ಸಾಧ್ಯತೆ ಇದೆ. ವರ್ಗಾವಣೆಯಾದ ಸಬ್ ಇನ್ಸ್‌ಪೆಕ್ಟರ್, ಕಾನ್‌ಸ್ಟೆಬಲ್‌ಗಳಲ್ಲಿ ಬಹುತೇಕರು ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ನಕ್ಸಲ್ ಚಟುವಟಿಕೆ ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದರು.
ಹೀಗಿರುವಾಗ ಏಕಾಏಕಿ ದೊಡ್ಡ ಸಂಖ್ಯೆಯ ಬದಲಾವಣೆ ಕೆಟ್ಟ ಪರಿಣಾಮ ಬೀರುತ್ತದೆ. ನಕ್ಸಲ್ ಪೀಡಿತ 22 ಕುಗ್ರಾಮಗಳನ್ನು ಹೊಸಬರಿಗೆ ಅರಿಯುವುದು ಕಷ್ಟವಾಗುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಒಂದು ಹಂತದಲ್ಲಿ ಅಸಮಾಧಾನ ಮೇರೆ ಮೀರಿ ಹಳ್ಳಿಗರು ಪ್ರತಿಭಟನೆಗೂ ಮುಂದಾಗಿದ್ದರು. ಕೊನೆಗೆ ಠಾಣೆಯ ಸಿಬ್ಬಂದಿಯೇ ಮನವರಿಕೆ ಮಾಡಿ ಮನೆಗೆ ಕಳುಹಿಸಿದರು ಎಂದು ತಿಳಿದುಬಂದಿದೆ.