ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಸಿಯೂಟ: ಖಾಸಗಿಯಿಂದ ಬಿಡಿಸಿ

Lingaraj Badiger
Updated On : 2 Sept 2013, 11:08 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಸೆ.1
ಸಮಾಜವಾದಿ ಚಿಂತನೆಯಿಂದ ಬಂದ ಸಿದ್ದರಾಮಯ್ಯ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಅವರು ಬಿಸಿಯೂಟ ಯೋಜನೆಯನ್ನು ಖಾಸಗಿಯವರ ಕಪಿಮುಷ್ಠಿಯಿಂದ ಬಿಡಿಸುವ ಕೆಲಸ ಮಾಡಲಿ ಎಂದು ಶಾಸಕ ವೈ.ಎಸ್.ವಿ.ದತ್ತ ಆಗ್ರಹಿಸಿದ್ದಾರೆ.
ಮಿಷನ್ ಕಾಂಪೌಡ್‌ನ ಸೆಂಟ್ ಥಾಮಸ್ ಸಮುದಾಯ ಭವನದಲ್ಲಿ ನಡೆಯುತ್ತಿರುವ 3ನೇ ರಾಜ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಶಿಕ್ಷಣ ಕ್ಷೇತ್ರದಲ್ಲಿ ಬಿಸಿಯೂಟ ಯೋಜನೆಯ ಮಹತ್ವ ಮತ್ತು ಸವಾಲುಗಳು ವಿಷಯದ ಕುರಿತು ಮಾತನಾಡಿ, ಇಸ್ಕಾನ್ ಎನ್‌ಜಿ ಸ್ವಯಂಸೇವಾ ಸಂಸ್ಥೆಯೇ ಅಥವಾ ಧಾರ್ಮಿಕ ಇಲಾಖೆ ದತ್ತಿಗೆ ಸೇರಿದೆಯೇ ಎಂಬ ಅನುಮಾನ ಮೂಡುತ್ತಿದೆ. ಬಿಸಿಯೂಟ ಯೋಜನೆಯಲ್ಲಿ ಇಸ್ಕಾನ್ ಪಾತ್ರಧಾರ ಹಾಗೂ ಸೂತ್ರಧಾರನಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ದುಡ್ಡು ಬಾಚಿ ತಿನ್ನುತ್ತಿರುವ ಇಸ್ಕಾನ್, ಹೊರಗಡೆ ಮಾತ್ರ ಸ್ವಯಂಸೇವಾ ಸಂಸ್ಥೆ ಎಂದು ಬಿಂಬಿಸಿಕೊಳ್ಳುತ್ತಿದೆ. ಇಸ್ಕಾನ್ ಎನ್ನುವುದು ಭಾರತದಲ್ಲಿ ಅಕ್ಷಯ ಪಾತ್ರೆಯಿದ್ದಂತೆ. ಆದರೆ, ಇದೇ ಇಸ್ಕಾನ್ ಇಲ್ಲಿನ ಬಡವರು, ಅಂಗವಿಕಲರು ಹೀಗೆ ಎಲ್ಲರ ಫೋಟೋ ಮುಂದಿಟ್ಟುಕೊಂಡು ವಿದೇಶಗಳಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದು ನಿಂತಿದೆ. ವಿದೇಶದಲ್ಲಿ ದತ್ತಿ ಎತ್ತಲು ಇಸ್ಕಾನ್‌ಗೆ ಸರ್ಕಾರ ಅನುಮತಿ ನೀಡಿದೆಯೇ ಎಂದು ಹೇಳಿದರೆ ಸರ್ಕಾರ ಇಲ್ಲ ಎನ್ನುತ್ತದೆ. ಆದರೆ, ಬಿಸಿಯೂಟಕ್ಕೆ ಮಾತ್ರ ಹಣ ನೀಡುತ್ತಿದ್ದೇವೆ ಎಂದು ಹೇಳುತ್ತಿದೆ. ಇದು ಸರಿಯಲ್ಲ ಎಂದರು.
ಸ್ವಯಂಸೇವಾ ಸಂಸ್ಥೆಗಳು ಪ್ರಾಮಾಣಿಕವಾಗಿದ್ದರೆ, ಸಾರ್ವಜನಿಕ ಹಿತಾಸಕ್ತಿ ಹೊಂದಿದ್ದರೆ ಸರ್ಕಾರದ ಹಣದ ಬದಲು, ಅವರೇ ಆ ಯೋಜನೆ ಅನುಷ್ಠಾನಗೊಳಿಸಲಿ. ಅದನ್ನು ಬಿಟ್ಟು ಸರ್ಕಾರದ ದುಡ್ಡಿಗೆ ಸ್ವಯಂ ಸೇವಾಸಂಸ್ಥೆಗಳು ಕೈ ಚಾಚುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಸಾರ್ವಜನಿಕರ ಹಣ ಸಾರ್ವಜನಿಕರಿಗೆ ಯೋಜನೆಗಳ ಮೂಲಕ ಹಂಚಲು ಸರ್ಕಾರವಿದೆ. ಸರ್ಕಾರದ ಸಂಬಳ ಪಡೆಯುವ ಅಧಿಕಾರಿಗಳಿದ್ದಾರೆ, ಇಲಾಖೆಗಳಿವೆ. ಈ ಮೂಲಕ ಯೋಜನೆ ಅನುಷ್ಠಾನಗೊಂಡರೆ ಹಣಕ್ಕೆ ಲೆಕ್ಕವೂ ಸಿಗುತ್ತದೆ ಎಂದು ಪ್ರತಿಪಾದಿಸಿದರು.
1967ರಲ್ಲಿ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆದರೆ, 1992ರಲ್ಲಿ ಮತ್ತೆ ಸರ್ಕಾರದ ಯೋಜನೆಗಳನ್ನು ಖಾಸಗಿಯವರ ಕೈಗೆ ಕೊಡಲಾಯಿತು. ಖಾಸಗಿಕರಣ ಒಪ್ಪಿಕೊಂಡು 22 ವರ್ಷ ಕಳೆದರೂ ಅದನ್ನು ಪುನರ್ ವಿಮರ್ಶೆಗೊಳಪಡಿಸುವ ಚಿಂತನೆ ಮಾಡಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ, ಸಿಪಿಐ ರಾಜ್ಯ ಕಾರ್ಯದರ್ಶಿ ವಿ. ಲೋಕೇಶ್, ಅಕ್ಷರ ದಾಸೋಹ ನೌಕರರ ಸಂಘಟನೆಯ ಎ.ಆರ್. ಸಿಂಧು ಇದ್ದರು.
ಇಂದು ಸಮಾರೋಪ: ರಾಜ್ಯ ಅಕ್ಷರ ದಾಸೋಹ ನೌಕರರ 3ನೇ ರಾಜ್ಯ ಸಮ್ಮೇಳನದ ಸಮಾರೋಪ ಸೆ.2 ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಅಕ್ಷರ ದಾಸೋಹ ನೌಕರರ ಸಂಘಟನೆಯ ಸಿಂಧು, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅನಂತ ನಾಯಕ್, ಡಿವೈಎಫ್‌ಐನ ಬಿ. ರಾಜಶೇಖರಮೂರ್ತಿ, ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಯಮುನಾ ಗಾಂವ್ಕರ್, ಲೀಲಾವತಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement