ಬೆಳೆನಷ್ಟ ಅಂದಾಜು ಸಲ್ಲಿಸುವಲ್ಲಿ ಸರ್ಕಾರ ವಿಫಲ
ತೀರ್ಥಹಳ್ಳಿ, ಸೆ.1 ಈ ಬಾರಿಯ ಅತಿವೃಷ್ಟಿಯಲ್ಲಿ ಸಾಕಷ್ಟು ಬೆಳೆಹಾನಿಯಾಗಿ ನಷ್ಟ ಉಂಟಾಗಿದ್ದು, ಈ ನಷ್ಟದ ಪ್ರಮಾಣದ ಅಂದಾಜನ್ನು ರಾಜ್ಯ ಸರ್ಕಾರ ಕೇಂದ್ರದ ಕೃಷಿ ಸಚಿವರಿಗೆ ಸಲ್ಲಿಸಲು ವಿಫಲವಾಗಿದ್ದು, ಸಂಸದರ ನಿಯೋಗ ಇತ್ತೀಚೆಗೆ ಕೇಂದ್ರ ಕೃಷಿ ಸಚಿವರನ್ನು ಭೇಟಿಮಾಡಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ ಎಂದು ವಿಧಾನಸಭಾ ವಿರೋಧಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಭಾನುವಾರ ತೀರ್ಥಹಳ್ಳಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಗೆ ಬಂದಿದ್ದ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಇತ್ತೀಚೆಗೆ 100 ದಿನ ಪೂರೈಸಿದ ಸಂದರ್ಭದಲ್ಲಿ ಪುಸ್ತಕ ಹೊರತಂದಿದ್ದು, ಈಗಾಗಲೇ ಸಾಕಷ್ಟು ಭರವಸೆ ಪೂರೈಸಿದ್ದಾಗಿ ಹೇಳಿಕೊಂಡಿದೆ ಎಂದರು.
ಜಾಹೀರಾತು: ಆದರೆ ಹೆಚ್ಚಿನ ಕಾರ್ಯಕ್ರಮಗಳೆಲ್ಲ ಹಿಂದಿನ ಸರ್ಕಾರಗಳು ಘೋಷಿಸಿದ ಕಾರ್ಯಕ್ರಮಗಳೇ ಆಗಿವೆ ಎಂದು ಹೇಳಿದರು. ಈಗ ಬರಿ ಬಣ್ಣಬಣ್ಣದ ಜಾಹೀರಾತುಗಳನ್ನು ವೀಕ್ಷಿಸುವ ಭಾಗ್ಯ ರಾಜ್ಯದ ಜನತೆಗೆ ಒದಗಿಬಂದಿದೆ ಎಂದು ಕುಟುಕಿದರು.
ಅಧಿಕಾರಿಗಳು ಹಾಗೂ ಮಂತ್ರಿಪರಿವಾರದವರು ಓಡಾಟಕ್ಕೆ ಮಾಡಿದ ಖರ್ಚಿನಿಂದ ಒಂದು ಸಣ್ಣ ಹಳ್ಳಿಯನ್ನು ಪುನಶ್ಚೇತನ ಮಾಡಬಹುದಾಗಿತ್ತು ಎಂದ ಅವರು, ಈ ಮಳೆಗಾಲದಲ್ಲಿ ಸಾಕಷ್ಟು ರಸ್ತೆ, ಸೇತುವೆ, ಕೃಷಿ ಜಮೀನುಗಳು ಪೂರ್ಣ ಹಾಳಾಗಿವೆ ಎಂದರು.
ಪರಿಹಾರದ ಹೆಸರಿನಲ್ಲಿ ಜಿಲ್ಲೆಗೆ ಬಿಡುಗಡೆ ಮಾಡಿರುವ ಹಣ ಏನೇನೂ ಸಾಲದು. ತಮ್ಮ ಲೆಕ್ಕದಲ್ಲಿ ಅಂದಾಜು ರು. 810 ಕೋಟಿ ಹಾನಿಯಾಗಿದ್ದು, ಮಲೆನಾಡು ಜಿಲ್ಲೆಗಳು, ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಹಾನಿಯಾಗಿದೆ ಎಂದರು. ನಷ್ಟದ ಪ್ರಮಾಣ ಕೇಳಿ ಮುಖ್ಯ ಕಾರ್ಯದರ್ಶಿಯವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಉತ್ತರ ಇನ್ನೂ ಬಂದಿಲ್ಲ ಎಂದು ಹೇಳಿದರು.
ಆಹಾರ ಭದ್ರತಾ ಮಸೂದೆ: ಚುನಾವಣೆಗೆ ಹೋಗುವ ಕೊನೆ ಹಂತದ ಕಾರ್ಯಕ್ರಮದ ಘೋಷಣೆಯಾಗಿ ಆಹಾರ ಭದ್ರತಾ ಮಸೂದೆ ಹೊರಬಿದ್ದಿದೆ. 2009ರಲ್ಲೇ ಆಗಿನ ರಾಷ್ಟ್ರಪತಿಯವರು ಈ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಈ ಬಗ್ಗೆ ಘೋಷಣೆ ಮಾಡಲು 5 ವರ್ಷ ಸಮಯ ತೆಗೆದುಕೊಂಡಿದೆ ಎಂದು ವ್ಯಂಗ್ಯವಾಡಿದರು.
ಸೊರಬ ಶಾಸಕ ಮಧುಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾಪೂರ್ಯಾನಾಯ್ಕ, ಜಿಲ್ಲಾಧ್ಯಕ್ಷ ಶ್ರೀಕಾಂತ್, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮದನ್ ಹಾಜರಿದ್ದರು.