ರು. 871.57 ಕೋಟಿ ಪ್ರೀಮಿಯಂ ಸಂಗ್ರಹ
ಕ.ಪ್ರ.ವಾರ್ತೆ, ಶಿವಮೊಗ್ಗ, ಸೆ.1
ಭಾರತೀಯ ಜೀವ ವಿಮಾ ನಿಗಮದ ಶಿವಮೊಗ್ಗ ವಿಭಾಗ 2012-13ನೇ ಸಾಲಿನಲ್ಲಿ ಉತ್ತಮ ಸಾಧನೆ ತೋರಿದ್ದು, ಈ ಅವಧಿಯಲ್ಲಿ ಒಟ್ಟು 20,25,845 ಪಾಲಿಸಿ ಸೇವೆಯಲ್ಲಿದೆ. 2,71,075 ಪಾಲಿಸಿಗಳು ಹೊಸದಾಗಿ ಮಾರಾಟಗೊಂಡಿದ್ದು, ಒಟ್ಟು ರು. 871.57 ಕೋಟಿ ಪ್ರೀಮಿಯಂ ಸಂಗ್ರಹಿಸಿದೆ. ರು. 564.09 ಕೋಟಿ ಪಾಲಿಸಿಗಳ ಪಾವತಿ ಮಾಡಲಾಗಿದೆ ಎಂದು ಎಲ್ಐಸಿ ವಿಭಾಗೀಯ ಹಿರಿಯ ಪ್ರಬಂಧಕ ಎಂ. ಬಾಲಯೋಗಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಿವಮೊಗ್ಗ ವಿಭಾಗದ ಎಲ್ಲಾ ಪಾಲಿಸಿ ಪಾವತಿಗಳನ್ನು ನೂತನ ತಂತ್ರಜ್ಞಾನವಾದ ನೆಫ್ಟ್ ಮೂಲಕ ಮಾಡಲಾಗುತ್ತಿದೆ. ಈ ವಿಭಾಗ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿದೆ ಎಂದು ಹೇಳಿದರು.
ನಿಗಮ ತನ್ನ ಸಾಮಾಜಿಕ ಜವಾಬ್ದಾರಿಯ ಧ್ಯೋತಕವಾಗಿ ಗೋಲ್ಡನ್ ಜ್ಯುಬಿಲಿ ಫೌಂಡೇಶನ್ ಸ್ಥಾಪಿಸಿದ್ದು, ಇದು ಸ್ಥಾಪನೆಗೊಂಡಾಗಿನಿಂದ ಈ ವರೆಗೆ 252 ಸ್ವಸಹಾಯ ಸಂಘಗಳಿಗೆ ಸಹಾಯಧನ ನೀಡಲಾಗಿದೆ ಎಂದರು.
ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಮುಂದುವರಿಸಲು ಗೋಲ್ಡನ್ ಜ್ಯುಬಿಲಿ ಫೌಂಡೇಶನ್ನಿಂದ ರು. 10,000 ವರೆಗೆ ವಿದ್ಯಾರ್ಥಿ ವೇತನವನ್ನು 6755 ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಬಾಲಯೋಗಿ ತಿಳಿಸಿದರು.
ಆರ್ಥಿಕ ನೆರವು: ಮಲ್ಲಾಡಿಹಳ್ಳಿಯ ಅನಂತ ಸೇವಾಶ್ರಮ ( 30 ಲಕ್ಷ), ಭದ್ರಾವತಿಯ ತರುಣ ಭಾರತಿ ವಿಶ್ವಸ್ತ ಮಂಡಳಿ ( 20.55 ಲಕ್ಷ) ಸಾಗರದ ವಿದ್ಯಾಭಿವೃದ್ಧಿ ಸಂಘ ಕೆಡಲಸರ ( 26 ಲಕ್ಷ), ಇಕ್ಕೇರಿ ಎಜುಕೇಷನ್ ಸೊಸೈಟಿ ( 14 ಲಕ್ಷ) ಆರ್ಥಿಕ ನೆರವು ನೀಡಲಾಗಿದೆ ಎಂದರು.
2007ರಲ್ಲಿ ಪ್ರಾರಂಭಗೊಂಡ ಶಿವಮೊಗ್ಗ ವಿಭಾಗವು ಈ ವರೆಗೆ 66 ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ರು. 10,000 ವಿದ್ಯಾರ್ಥಿ ವೇತನ ನೀಡಿ, ಅವರ ಶಿಕ್ಷಣಕ್ಕೆ ಸಹಾಯ ಮಾಡಿದೆ ಎಂದವರು ತಿಳಿಸಿದರು.