ಕಾರ್ಮಿಕರಿಗಾಗಿ ಪ್ರತ್ಯೇಕ ಮಸೂದೆ ಜಾರಿಯಾಗಲಿ: ಧನಶೇಖರ್
ಸೊರಬ: ಕಾರ್ಮಿಕರಿಗಾಗಿ ಪ್ರತ್ಯೇಕ ಮಸೂದೆಯೇ ಜಾರಿಯಾಗಬೇಕು ಎಂದು ಕೆಎಸ್ಸಿಡಬ್ಲ್ಯೂಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಧನಶೇಖರ್ ಆಗ್ರಹಿಸಿದ್ದಾರೆ.
ತಾಲೂಕು ಆನವಟ್ಟಿ ಸಪಪೂ ಕಾಲೇಜು ಸಭಾಂಗಣದಲ್ಲಿ ರಾಜ್ಯ ಕನ್ಟ್ರ್ಸ್‌ಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ವತಿಯಿಂದ ನಡೆದ ಕಟ್ಟಡ ಕಾರ್ಮಿಕರ ಸಂಘ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕ ವಲಯದಲ್ಲಿ ಶ್ರಮ ಹಾಗೂ ಕೌಶಲ್ಯ ಹೊಂದಿರುವ ರಂಗಗಳಲ್ಲಿ ಕೃಷಿ, ಕಟ್ಟಡ ನಿರ್ಮಾಣ ಪ್ರಮುಖವಾಗಿದೆ.
ಇಲ್ಲಿ ಶ್ರಮಜೀವಿಗಳೇ ಹೆಚ್ಚಾಗಿ ದುಡಿಯುತ್ತಾರೆ. ಕಾರ್ಮಿಕರಲ್ಲಿ ಶೇ.7 ಸಂಘಟಿತ ಹಾಗೂ ಶೇ.93 ಅಸಂಘಟಿತರಾಗಿದ್ದು, ಬೋನಸ್, ವೇತನ, ನಿವೃತ್ತಿ ವೇತನ, ಬಡ್ತಿ, ರಜೆ, ಪಂಚಣಿ ಮುಂತಾದವುಗಳನ್ನು ಸಂಘಟಿತರೇ ಬಹುತೇಕ ಪಡೆಯುತ್ತಿದೆ. ಅಸಂಘಟಿತರು ಆರ್ಥಿಕ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದರು.
ಕಾರ್ಮಿಕರಿಗಾಗಿ 1,670 ಕಾನೂನುಗಳಿದ್ದರೂ ಅಸಂಘಟಿತ ಕಾರ್ಮಿಕರಿಗೆ ನ್ಯಾಯ ಸಿಗುತ್ತಿಲ್ಲ. ಈ ಎಲ್ಲ ನಿಟ್ಟಿನಲ್ಲಿ ಸಂಘಟಿತರಾಗುವ ಮೂಲಕ ಸೌಲಭ್ಯ ಪಡೆಯಬೇಕು ಎಂದರು.
ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಗಿರಿಜಮ್ಮ, ಪಾಟೀಲ್, ಜೆ. ಚಂದ್ರಶೇಖರಪ್ಪ, ವಾಸುದೇವನ್, ಶ್ರೀನಿವಾಸ್, ಮೋಹನ್, ಸೆಲ್ವರಾಜ್, ಕಾರಳ್ಳಿ ರಂಗಪ್ಪ, ಸಂಜೀವ್ ಲಕ್ಕೊಳ್ಳಿ, ಮಂಜುನಾಥ ಮೇಸ್ತ್ರಿ, ಸುರೇಶ್ ಮೇಸ್ತ್ರಿ, ಶಂಕರಪ್ಪ ಮೇಸ್ತ್ರಿ ಇದ್ದರು.