ನಮ್ಮ ದುಡ್ಡು, ನಿಮ್ಮ ಯೋಜನೆ: ಟೀಕೆ
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಉತ್ಸಾಹದಿಂದ ಕಾರ್ಮಿಕರಿಗಾಗಿ 6 ಕಲ್ಯಾಣ ಮಂಟಪ, 4 ಶಾಲೆ ಇತ್ಯಾದಿ ತೆರೆಯುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ಬಳಸುತ್ತಿರುವ ಹಣವನ್ನು ಒದಗಿಸಿರುವುದು ತಮ್ಮ ಸರ್ಕಾರ (20-20 ಬಿಜೆಪಿ- ಜೆಡಿಎಸ್ ಸರ್ಕಾರ) ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ಮುಖ್ಯಮಂತ್ರಿಯಾಗಿದ್ದಾಗಿನ ಅವಧಿಯ ಯೋಜನೆ ನೆನಪಿಸಿದರು. ಕಾರ್ಮಿಕರ ಕುಟುಂಬಗಳಿಗೆ ನೆರವಾಗಲು 12 ಯೋಜನೆಗಳನ್ನು ಆರಂಭಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಗ್ರಹಿಸಿದ 2,068 ಕೋಟಿ ಹಣ ಹಾಗೆಯೇ ಇತ್ತು. ಬಿಜೆಪಿ ಸರ್ಕಾರ ಇದನ್ನು ಬಳಸಲಿಲ್ಲ. ಈಗ ಸಿದ್ದರಾಮಯ್ಯ ಅವರ ಸರ್ಕಾರವು ಕಾರ್ಮಿಕ ಕಲ್ಯಾಣ ನಿಧಿಯಿಂದ ಕಲ್ಯಾಣ ಮಂಟಪ, ಶಾಲೆ ಕಟ್ಟಲು ಹೊರಟಿದೆ ಎಂದು ತಿಳಿಸಿದರು.
ಮರಿ ಪುಡಾರಿಗಳು: ಎಲ್ಲೆಡೆ ಕಾಂಗ್ರೆಸ್ನ ಮರಿಪುಡಾರಿಗಳ ಹಾವಳಿ ಹೆಚ್ಚಾಗಿದೆ. ಸರ್ಕಾರಿ ಕಚೇರಿಗಳನ್ನು ಅವರು ಆವರಿಸಿಕೊಂಡಿದ್ದಾರೆ. ಅಧಿಕಾರಿಗಳೂ ಸಹ ಇವರ ಮಾತನ್ನೇ ಕೇಳುತ್ತಿದ್ದಾರೆ ಎಂದ ಕುಮಾರಸ್ವಾಮಿ, ಅಧಿಕಾರಿಗಳು ಕಾಂಗ್ರೆಸ್ ನೀಡುವ ದುಡ್ಡಿನಿಂದ ಜೀವನ ಮಾಡುತ್ತಿಲ್ಲ. ಜನರ ದುಡ್ಡಿನಿಂದ ಸಂಬಳ ಪಡೆಯುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು.