ಬೆಲೆ ಏರಿಕೆ ಖಂಡಿಸಿ ಕೆಜೆಪಿ ಪ್ರತಿಭಟನೆ
ಕ.ಪ್ರ.ವಾರ್ತೆ, ಭದ್ರಾವತಿ, ಸೆ.2
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೆಜೆಪಿ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಕೂಡಲೇ ದರ ಏರಿಕೆ ಹಿಂಪಡೆಯುವಂತೆ ಆಗ್ರಹಿಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
ಕಳೆದ 2 ತಿಂಗಳಿನಿಂದ ಪದೇಪದೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಮಾರುಕಟ್ಟೆ ವ್ಯವಹಾರಗಳಲ್ಲಿ ಅಸಾಧ್ಯ ಒತ್ತಡದಿಂದಾಗಿ ಎಲ್ಲಾ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ.
ಜನಸಾಮಾನ್ಯರ ಜೀವನ ದುಸ್ತರವಾಗುತ್ತಿದೆ. ಜೊತೆಯಲ್ಲಿ ಡಾಲರ್ನ ಎದುರು ರುಪಾಯಿ ದುರ್ಬಲವಾಗುತ್ತಲೇ ಇದೆ. ಇದರಿಂದಾಗಿ ಜನಸಾಮಾನ್ಯರ ಭವಿಷ್ಯ ಜೀವನ ಅಂಧಕಾರದ ಕೂಪದೊಳಕ್ಕೆ ತಳ್ಳಲ್ಪಡುತ್ತಿದೆ ಎಂದು ದೂರಿದರು.
ಬೆಲೆ ಏರಿಕೆ: ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳಿದ್ದು, ಜನಸಮಾನ್ಯರು ತಮ್ಮ ಕಷ್ಟ ಕಾರ್ಪಣ್ಯಗಳ ನಡುವೆಯೂ ಶಕ್ತಿಮೀರಿ ಶ್ರದ್ಧಾಭಕ್ತಿಗಳಿಂದ ಹಬ್ಬ ಆಚರಿಸುತ್ತಲೇ ಬಂದಿದ್ದಾರೆ. ಈಗಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸಾಗಾಣಿಕೆ ವೆಚ್ಚ ದುಬಾರಿಯಾಗಿ ಸಾಮಾನ್ಯ ಜನರು ದಿನನಿತ್ಯ ಬಳಸುವ ಸಾಮಾಗ್ರಿಗಳ ಬೆಲೆಯೂ ಏರುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ವತಃ ಆರ್ಥಿಕ ತಜ್ಞ ಎನಿಸಿಕೊಂಡಿರುವ ಪ್ರಧಾನಿ ಮನಮೋಹನಸಿಂಗ್ ಅವರು ರುಪಾಯಿ ದರ ಕುಸಿತ ತಡೆಯುವ ಬಗ್ಗೆ ವಿಫಲರಾಗಿದ್ದಾರೆ. ಈಗಿನ ಹಣಕಾಸು ಸಚಿವರು ಈ ರುಪಾಯಿ ಮೌಲ್ಯ ಕುಸಿತಕ್ಕೆ ಹಿಂದಿನ ಹಣಕಾಸು ಸಚಿವರೇ (ಅಂದರೆ ರಾಷ್ಟ್ರಪತಿಗಳೇ) ಕಾರಣ ಎಂದಿರುವುದು ತೀರಾ ಕುಚೋದ್ಯದ ಮಾತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.