ಯಾವ ಪಕ್ಷದೊಂದಿಗೂ ಮೈತ್ರಿ ಇಲ್ಲ
ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. 28 ಕ್ಷೇತ್ರದಲ್ಲಿಯೂ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಕನಿಷ್ಠ 16 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಈ ಕ್ಷೇತ್ರಗಳ ಅಭ್ಯರ್ಥಿಗಳನ್ನು ಈ ತಿಂಗಳ ಕೊನೆಯಲ್ಲಿಯೇ ಘೋಷಿಸಲಾಗುವುದು ಎಂದಿದ್ದಾರೆ. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ಪಶ್ಚಾತ್ತಾಪವಿಲ್ಲ. ಈ ಪಕ್ಷದೊಂದಿಗೆ ಮೈತ್ರಿ ಮುಂದುವರಿಸುವುದಕ್ಕೂ ಆಸಕ್ತಿ ಇಲ್ಲ.
ಏಕೆಂದರೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರು ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಜೆಡಿಎಸ್ ಸಹಕಾರ ಕೊಡಬೇಕು ಎಂದಿದ್ದಾರೆ. ನಮಗೆ ಮೋದಿ ಅವರನ್ನು ಪ್ರಧಾನಿ ಮಾಡುವ ಇಚ್ಛೆ ಇಲ್ಲ. ಹಾಗಾಗಿ ತೃತೀಯ ರಂಗವನ್ನು ಬಲಪಡಿಸಲಾಗುವುದು ಎಂದರು.
ಬಿಜೆಪಿ ಲೆಕ್ಕ ಹಾಕಲಿ: ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಗಳಿಸಿದ ಮತಗಳು ಬಿಜೆಪಿಯವು ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ಹೇಳಿದ್ದಕ್ಕೆ ತೀವ್ರವಾಗಿ ಟೀಕಿಸಿದ ಅವರು, ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಎಷ್ಟು ಮತ ಗಳಿಸಿತ್ತೆಂದು ಲೆಕ್ಕ ಹಾಕಲಿ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಗೆ ಮತ ಬರುವುದಿಲ್ಲ ಎಂಬ ಕಾರಣದಿಂದಲೇ ಅವರು ಹೊಂದಾಣಿಕೆಗೆ ಮುಂದಾಗಿದ್ದರು ಎಂದರು.
ರೌಡಿಯಾಗಿರ್ಬೇಕು: ಎಚ್ಡಿಕೆ
ರೌಡಿ ಪಟ್ಟ ಇರಬೇಕು. ನೋಡಿದ್ರೆ ಹೆದರೋ ಹಾಗಿರಬೇಕು. ಹೊಡಿಯೋ ಸಂದರ್ಭದಲ್ಲಿ ಹೊಡೀಬೇಕು. ಯಾವಾಗ್ಲೂ ಹೊಡಿಬಾರ್ದು.
ಅವಾಗ ರೌಡಿಗಳಿಗೂ ನಮಗೂ ವ್ಯತ್ಯಾಸ ಇರೋಲ್ಲ ಎಂದು ಭದ್ರಾವತಿಯ ಜೆಡಿಎಸ್ ಶಾಸಕ ಎಂ.ಜೆ. ಅಪ್ಪಾಜಿಗೌಡ ಹೇಳಿದರೆ ಅದನ್ನು ತಮ್ಮ ಭಾಷಣದಲ್ಲಿ ಅನುಮೋದಿಸಿದವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ.
ಜಿಲ್ಲಾ ಜಾತ್ಯತೀತ ಜನತಾದಳ ಪದಾಧಿಕಾರಿಗಳು ಹಾಗೂ ಮುಖಂಡ ಸಮಾವೇಶದಲ್ಲಿ ಈ ಚರ್ಚೆ ಕಂಡುಬಂತು.
ಮೊದಲು ಮಾತನಾಡಿದ ಶಾಸಕ ಅಪ್ಪಾಜಿಗೌಡ ಅವರು ರೌಡಿ ಪಟ್ಟಬೇಕು ಎಂದು ಹೇಳಿದಾಗ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರೌಡಿ ಪಟ್ಟ ಬೇಕು. ನಮಗೂ ಜೋರಾಗಿ ಮಾತನಾಡಲು ಬರುತ್ತದೆ ಎಂದು ಬೇರೆಯವರಿಗೆ ಗೊತ್ತಾಗಬೇಕು. ಆದರೆ, ರೌಡಿ ಆಗಬಾರದು ಎಂದರು.
ವಾಕ್ಸಮರ..
ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮದನ್ ಹಾಗೂ ರಾಜ್ಯ ಉಪಾಧ್ಯಕ್ಷೆ ಪವಿತ್ರಾ ರಾಮಯ್ಯ ಅವರ ನಡುವಿನ ವಾಕ್ಸಮರ ಕೆಲಕಾಲ ಸಭೆಯಲ್ಲಿ ಗೊಂದಲ ಮೂಡಿಸಿತು.
ಮೊದಲು ಮಾತನಾಡಿದ ಮದನ್ತ್ಮ್ಮ ಸೋಲಿನ ಕಾರಣಗಳನ್ನು ವಿಶ್ಲೇಷಿಸಿ, ತೀರ್ಥಹಳ್ಳಿಯಲ್ಲಿ ಮದನ್ ಸೋಲಬೇಕು. ಶಿವಮೊಗ್ಗದಲ್ಲಿ ಶ್ರೀಕಾಂತ್ ಸೋಲಬೇಕು, ಗ್ರಾಮಾಂತರದಲ್ಲಿ ಶಾರದಾ ಸೋಲಬೇಕು, ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂಬ ಧೋರಣೆಯನ್ನು ಕೆಲ ಮುಖಂಡರು ಹೊಂದಿದ್ದು, ಇದನ್ನು ಕೈಬಿಡಬೇಕು. ಪಕ್ಷ ಹುದ್ದೆ ಕೊಟ್ಟರೆ ಅದನ್ನು ಸೂಕ್ತವಾಗಿ ಪಕ್ಷ ಸಂಘಟನೆಗೆ ಬಳಸಿ ಎಂದು ಚಾಟಿ ಬೀಸಿದರು.
ಇವರ ಮಾತು ಮುಗಿಯುತ್ತದ್ದಂತೆ ಮೈಕ್ ಬಳಿ ಬಂದ ಪವಿತ್ರಾ ರಾಮಯ್ಯ, ನಾನು ಜಿಲ್ಲಾ ಪಂಚಾಯ್ತಿ ಚುನಾವಣೆ ವೇಳೆ ಒಂಟಿಯಾಗಿದ್ದೆ. ಯಾರೂ ಜತಗಿರಲಿಲ್ಲ. ಆದರೆ, ವಿಧಾನಸಭೆ ಚುನಾವಣೆ ವೇಳೆ ಯಾರೊಬ್ಬರೂ ಸೋಲಬೇಕು ಎಂದು ನಾನು ಹೇಳಿಲ್ಲ. ಮುಖಂಡರು ಹೇಳಿದರೆ ಈಗಲೇ ರಾಜಿನಾಮೆ ನೀಡಲು ಸಿದ್ಧ, ಪಕ್ಷವನ್ನು ವಂಚಿಸುವ ಕೆಲಸವನ್ನು ಯಾವತ್ತೂ ಮಾಡಿಲ್ಲ ಎಂದರು.
ಅವರ ಮಾತುಗಳು ತೀವ್ರ ಚರ್ಚೆಗೆ ಗುರಿಯಾಗುತ್ತಿದ್ದಂತೆ ಪಕ್ಷದ ಮುಖಂಡರು ಎದ್ದು ನಿಂತು ಅವರ ಮಾತು ನಿಲ್ಲಿಸುವ ಪ್ರಯತ್ನ ಮಾಡಿದರು. ಸಭಿಕರ ಕಡೆಯಿಂದಲೂ ಕೆಲವರು ವೇದಿಕೆ ಮುಂಭಾಗ ಬಂದು ಜೋರಾಗಿ ಮಾತನಾಡಲು ಆರಂಭಿಸಿದರು. ಶಾಸಕ ಅಪ್ಪಾಜಿ ಗೌಡ ಅವರು ಎದ್ದುನಿಂತು ಸಮಾಧಾನಪಡಿಸಿದರು. ಆಗ ಪವಿತ್ರಾ ರಾಮಯ್ಯ ಅವರು ಅರ್ಧಕ್ಕೆ ಮಾತು ನಿಲ್ಲಿಸಿ ತೆರಳಿದರು.
ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಭಾಷಣದಲ್ಲಿ, ಸಣ್ಣಪುಟ್ಟ ಲೋಪಗಳನ್ನು ದೊಡ್ಡದು ಮಾಡಬಾರದು. ನಾಲ್ಕು ಗೋಡೆ ನಡುವೆ ಕುಳಿತುಕೊಂಡು ತೀರ್ಮಾನ ಮಾಡಬೇಕು ಎಂದರು.