ಶಿವಮೊಗ್ಗ ಶಾಸಕರ ಕಚೇರಿ ಉದ್ಘಾಟನೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಸೆ.2
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕರು ಒತ್ತು ನೀಡಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಬಿ.ಎಂ. ನಂಜುಂಡಪ್ಪ ಸಲಹೆ ನೀಡಿದರು.
ಸೋಮವಾರ ನೆಹರೂ ರಸ್ತೆಯ ಶಿವಪ್ಪನಾಯಕ ಮಾರುಕಟ್ಟೆ ಸಿಎಂಸಿ ಬ್ಲಾಕ್‌ನಲ್ಲಿ ಶಿವಮೊಗ್ಗ ನಗರ ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಮೇಲೆ ನಂಬಿಕೆ ಇಟ್ಟು ಶಾಸಕರನ್ನಾಗಿ ಜನರು ಆಯ್ಕೆ ಮಾಡಿದ್ದಾರೆ, ಅವರ ಬೇಡಿಕೆಗಳನ್ನು ಈಡೇರಿಸುವುದು ನಿಮ್ಮ ಕರ್ತವ್ಯ ಎಂದು ಶಾಸಕ ಪ್ರಸನ್ನಕುಮಾರ್‌ಗೆ ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಇಂದು ಸರ್ಕಾರ ಯಾವೆಲ್ಲಾ ಹೊಸ ಕಾರ್ಯಕ್ರಮ ತರುತ್ತದೋ ಅದನ್ನು ಅನುಷ್ಠಾನಕ್ಕೆ ತರುವುದು ಸರ್ಕಾರಿ ಅಧಿಕಾರಿಗಳು. ಆದರೆ ಸರ್ಕಾರಿ ಕಚೇರಿಗಳಲ್ಲಿ ಎಲ್ಲರಿಗೂ ಸಮಾನ ಗೌರವ ಸಿಗುವುದಿಲ್ಲ. ಆದರೆ, ನಮ್ಮ ಕಚೇರಿಯ ಬಾಗಿಲು ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಸದಾ ತೆರೆದಿರುತ್ತದೆ ಎಂದರು.
ಇದು ಕ್ಷೇತ್ರದ ಜನತೆಯ ಕಚೇರಿ. ನಾನು ಸದಾಕಾಲ ಜನರ ಆಶೋತ್ತರಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡುವುದರ ಮೂಲಕ ನಗರವನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ಶಾಸಕರ ಕಚೇರಿ ಎಂಬುದು ಸಾರ್ವಜನಿಕರ ಕಚೇರಿ. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಪಕ್ಷಾತೀತವಾಗಿ ಸೇವೆ ನೀಡುವುದು ಶಾಸಕರ ಜವಾಬ್ದಾರಿ ಎಂದರು.
ಪ್ರಮುಖರಾದ ಇಸ್ಮಾಯಿಲ್ ಖಾನ್, ರಮೇಶ್, ಪಿ. ರುದ್ರೇಶ್, ಡಾ. ಎನ್.ಎಲ್. ನಾಯಕ್, ಏಸು ರಕ್ಷಕನಾದನ್, ಮೌಲ್ವಿ ಮಹ್ಮದ್ ತಫಿ ಸಾಬ್ ಇದ್ದರು.