ಜೆಡಿಎಸ್ ನಿರ್ಣಾಯಕ...!
ಕ.ಪ್ರ.ವಾರ್ತೆ ಶಿವಮೊಗ್ಗ ಸೆ.3
ಶಿವಮೊಗ್ಗ ನಗರಸಭೆಗೆ ಚುನಾವಣೆಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ವೇಳಾಪಟ್ಟಿ ನಿಗದಿಪಡಿಸಿದ್ದು, ಸೆ.12ರಂದು ಆಯ್ಕೆ ನಡೆಯಲಿದೆ. ಆಯ್ಕೆಯಾದ ನಾಲ್ಕು ತಿಂಗಳ ನಂತರ ಮೊದಲ ಬಾರಿಗೆ ನಗರಸಭೆ ಸದಸ್ಯರು ಅಂದು ಮೊದಲು ಸಭೆ ಸೇರಲಿದ್ದು, ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.
ಮಹಿಳೆಗೆ ಪಟ್ಟ: ಅಧ್ಯಕ್ಷ ಸ್ಥಾನವು ಮಹಿಳೆ (ಬಿಸಿಎಂ-ಎ) ಉಪಾಧ್ಯಕ್ಷ ಸ್ಥಾನ ಮಹಿಳೆ (ಸಾಮಾನ್ಯ) ವರ್ಗಕ್ಕೆ ನಿಗದಿಯಾಗಿ ಮೀಸಲಾತಿ ಪ್ರಕಟವಾಗಿದೆ. ಆದರೆ ಯಾವ ಪಕ್ಷವೂ ಬಹುಮತ ಪಡೆಯದ ಕಾರಣ ಮೈತ್ರಿ ಮಾಡಿಕೊಳ್ಳಲು ರಾಜಕೀಯ ಪಕ್ಷಗಳ ನಡುವೆ ಸರ್ಕಸ್ ಶುರುವಾಗಿದೆ.
ನಗರಸಭೆ 35 ಸದಸ್ಯರ ಬಲ ಹೊಂದಿದ್ದು, ಕಾಂಗ್ರೆಸ್ 12, ಬಿಜೆಪಿ 8, ಕೆಜೆಪಿ 7, ಜೆಡಿಎಸ್ 5, ಎಸ್ಡಿಪಿಐ 1 ಹಾಗೂ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಆಡಳಿತ ಚುಕ್ಕಾಣಿ ಹಿಡಿಯಲು ಅಗತ್ಯವಾದ 18 ಸ್ಥಾನದ ಸ್ಪಷ್ಟ ಬಹುಮತ ಯಾವೊಂದು ಪಕ್ಷಕ್ಕೂ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೈತ್ರಿ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಜೆಡಿಎಸ್-ಪಕ್ಷೇತರರೇ ನಿರ್ಣಾಯಕ
ವಿಧಾನಸಭೆ ಚುನಾವಣೆಗೆ ಮುಂಚೆಯೇ ನಗರಸಭೆ ಚುನಾವಣೆ ನಡೆದಿತ್ತು. ಆಗ ಯಾರು ಯಾರೊಂದಿಗೆ ಬಹೊಂದಾಣಿಕೆ ಮಾಡಿಕೊಳ್ಳಬಹುದೆಂಬ ಚರ್ಚೆ ನಡೆದಿದ್ದವು. ಅಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕೆಜೆಪಿ (ಒಟ್ಟು 17) ಒಂದಾಗುವ ಸಾಧ್ಯತೆಗಳಿದ್ದವು. ಈಗ ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಯತ್ತ ಕರೆತರುವ ಪ್ರಯತ್ನಗಳು ನಡೆದಿರುವ ಹಿನ್ನಲೆಯಲ್ಲಿ ಬಿಜೆಪಿ-ಕೆಜೆಪಿ (ಒಟ್ಟು 15) ಮೈತ್ರಿಯೂ ನಡೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ವಿಚಿತ್ರವೆಂದರೆ ಈ ಎರಡು ಮೈತ್ರಿಕೂಟಗಳು ಆಡಳಿತ ನಡೆಸುವ ಪರಿಸ್ಥಿತಿ ಶಿವಮೊಗ್ಗ ನಗರಸಭೆಯಲ್ಲಿ ಇಲ್ಲ. ಈ ಎರಡು ಕೂಟಕ್ಕೂ ಸಹ ತೃತೀಯ ರಂಗದ ಸಹಕಾರ ಬೇಕೇಬೇಕು. ಹಾಗಾಗಿ ಜಾತ್ಯತೀತ ಜನತಾದಳದ ತೀರ್ಮಾನ ಅತ್ಯಂತ ನಿರ್ಣಾಯಕ. ಈ ಪಕ್ಷದ ಐವರು ಸದಸ್ಯರು ಯಾವ ಮೈತ್ರಿಕೂಟಕ್ಕೆ ಬೆಂಬಲ ಕೊಡುತ್ತಾರೋ ಅವರು ಅಧಿಕಾರಕ್ಕೇರುವುದು ಖಚಿತ.
ಪಕ್ಷೇತರರ ಬೆಂಬಲ: ಜೆಡಿಎಸ್ ಹೊರತುಪಡಿಸಿ ಮೈತ್ರಿ ಮಾಡಿಕೊಳ್ಳಬೇಕಾದರೆ ಇಬ್ಬರು ಪಕ್ಷೇತರರು ಹಾಗೂ ಎಸ್ಡಿಪಿಐ ಪಕ್ಷದಿಂದ ಆಯ್ಕೆಯಾಗಿರುವ ಒಬ್ಬರು ಸದಸ್ಯರ ಒಟ್ಟು ಬೆಂಬಲ ಪಡೆಯಲೇಬೇಕಾಗುತ್ತದೆ. ಈ ಮೊದಲು ಒಬ್ಬ ಪಕ್ಷೇತರರು ಕೆಜೆಪಿ ಜತೆ ಗುರುತಿಸಿಕೊಂಡಿದ್ದರೆ, ಇನ್ನೊಬ್ಬ ಪಕ್ಷೇತರರು ಕಾಂಗ್ರೆಸ್, ಜೆಡಿಎಸ್ ಜತೆ ಓಡಾಡುತ್ತಿದ್ದರು. ಈ ಮೂವರು ಸದಸ್ಯರ ಒಟ್ಟು ಬೆಂಬಲ ಕಷ್ಟವೇ.
ಅಲ್ಲದೇ ಕಾಂಗ್ರೆಸ್ ಸದಸ್ಯರಾಗಿದ್ದ ಕೆ.ಬಿ. ಪ್ರಸನ್ನಕುಮಾರ್ ಅವರು ಈಗ ಶಾಸಕರಾಗಿ ಆಯ್ಕೆಯಾಗಿದ್ದು, ಅವರ ಬೆಂಬಲ ಸದ್ಯ ಮಾತ್ರ, 6 ತಿಂಗಳ ನಂತರ ಸಿಗದು ಎಂಬ ಅರಿವೂ ಸಹ ಕಾಂಗ್ರೆಸ್ಗಿದೆ.
ಯಾವುದೇ ಗೊಂದಲವಿಲ್ಲದೇ ಆಡಳಿತ ನಡೆಸಬೇಕೆಂದರೆ ಜೆಡಿಎಸ್ ಸಹಕಾರ ಬೇಕೇಬೇಕು. ಈಗ ಚೆಂಡು ಜೆಡಿಎಸ್ ಅಂಗಳದಲ್ಲಿದೆ. ಈ ಪಕ್ಷದ ಮುಖಂಡರು ಬಿರುಸಿನ ಚರ್ಚೆ ಆರಂಭಿಸಿದ್ದಾರೆ.
ಆದರೆ ಈ ರೀತಿಯ ಯಾವುದೇ ಹೊಂದಾಣಿಕೆ ಕೆಲವೇ ತಿಂಗಳು ಮಾತ್ರ. ಶಿವಮೊಗ್ಗ ನಗರಸಭೆ ನಗರ ಪಾಲಿಕೆಯಾಗಿ ಪರಿವರ್ತನೆಯಾದ ನಂತರ ಮತ್ತೆ ಎಲ್ಲಾ ಸದಸ್ಯರು ಚುನಾವಣಾ ಕಣಕ್ಕೆ ಹೋಗಲೇಬೇಕಾದ ಪರಿಸ್ಥಿತಿ ಇದೆ.