ನೀರು ಸರಬರಾಜು: 2 ದಿನ ವ್ಯತ್ಯಯ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಸೆ. 3ರಂದು ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂದು ಕೃಷ್ಣರಾಜೇಂದ್ರ ನೀರು ಶುದ್ಧೀಕರಣ ಕೇಂದ್ರ ಮತ್ತು ಗಾಜನೂರು ನೀರು ಸರಬರಾಜು ಕೇಂದ್ರಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಸೆ. 3 ಮತ್ತು 4ರಂದು ಶಿವಮೊಗ್ಗ ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಉದ್ದೇಶಿಸಿದ್ದು, ಶಿಕಾರಿಪುರ ತಾಲೂಕಿನಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿ ಮೆಟ್ರಿಕ್ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಒಂದರಿಂದ ಹತ್ತನೇ ತರಗತಿಯವರೆಗ ವ್ಯಾಸಂಗ ಮಾಡುವ ಅವಧಿಯಲ್ಲಿ ಒಮ್ಮೆ ಮಾತ್ರ ಅರ್ಜಿ ಸಲ್ಲಿಸಬೇಕು. ಒಬ್ಬ ವಿದ್ಯಾರ್ಥಿಕಳೆದ ಸಾಲಿನಲ್ಲಿ ಒಂದನೇ ತರಗತಿಯಲ್ಲಿದ್ದು, ವಿದ್ಯಾರ್ಥಿ ವೇತನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಪುನಃ ಅರ್ಜಿ ಸಲ್ಲಿಸಬೇಕಾಗಿಲ್ಲ. ಪ್ರತಿ ವರ್ಷ ಶಿಷ್ಯವೇತನವನ್ನು ಕಳೆದ ವರ್ಷದ ಅರ್ಜಿಯನ್ನು ಪರಿಗಣಿಸಿ, ಮುಖ್ಯೋಪಾಧ್ಯಾಯರ ದೃಢೀಕರಣ ಪಡೆದು ಮಂಜೂರು ಮಾಡಲಾಗುವುದು ಅರ್ಜಿ ಸಲ್ಲಿಸುವ ಅಭ್ಯರ್ಥಿ ತನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಸೆ. 30ರೊಳಗೆ ಅರ್ಜಿ ಸಲ್ಲಿಸಬೇಕು. ವಿವರಗಳಿಗಾಗಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಶಿಕಾರಿಪುರ ದೂರವಾಣಿ ಸಂಖ್ಯೆ 08187 222164 ಅಥವಾ ಅಂತರ್ಜಾಲ ತಾಣ ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ ಸಂಪರ್ಕಿಸಬಹುದಾಗಿದೆ.
ಅಪಾಯದ ಸೇತುವೆ
ಭದ್ರಾವತಿ: ಇತ್ತೀಚೆಗೆ ಬಂದ ಭಾರೀ ಮಳೆಯಿಂದಾಗಿ ಭದ್ರಾನದಿಯು ಉಕ್ಕಿ ಹೊಸ ಸೇತುವೆಯ ಮೇಲೆ ಹರಿದ ಪರಿಣಾಮ ಸೇತುವೆಯ ಇಕ್ಕೆಲದ ತಡೆಗೋಡೆಗಳು ಅಲ್ಲಲ್ಲಿ ಮುರಿದು ಬಿದ್ದಿದೆ.
ರಸ್ತೆಯಲ್ಲಿ ಓಡಾಡುವ ಮಕ್ಕಳು ಮತ್ತು ಸಾರ್ವಜನಿಕರಿಗೆ ಅಪಾಯ ಒದಗುವ ಸ್ಥಿತಿಯಲ್ಲಿದೆ. ಮಕ್ಕಳು ಕುತೂಹಲದಿಂದ ಬಗ್ಗಿನೋಡಿ ಆಯತಪ್ಪಿ ನದಿಗೆ ಬೀಳುವ ಸಂಭವ ತಳ್ಳಿಹಾಕುವಂತಿಲ್ಲ. ಗಣಪತಿ ಹಬ್ಬ ಬೇರೆ ಹತ್ತಿರ ಬರುತ್ತಿರುವುದರಿಂದ ಸೇತುವೆ ಮೇಲೆ ಓಡಾಡುವವರ ಸಂಖ್ಯೆ ಹೆಚ್ಚಾಗಲಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಡೆಗೋಡೆಗಳನ್ನು ದುರಸ್ತಿ ಮಾಡಿಸಬೇಕೆಂದು ಭಾರತೀಯ ಜನತಾ ಪಕ್ಷದ ಭದ್ರಾವತಿ ಕ್ಷೇತ್ರದ ಅಧ್ಯಕ್ಷ ಎಂ. ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಎನ್. ರಮೇಶ್ ಒತ್ತಾಯಿಸಿದ್ದಾರೆ.
ಸಹ್ಯಾದ್ರಿ ವಿಜ್ಞಾನ ಪರಿಷತ್ಗೆ ಆಯ್ಕೆ
ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಜ್ಞಾನ ಪರಿಷತ್ಗೆ ಆಗಸ್ಟ್ 31ರಂದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಸುಪ್ರೀತ್ ಕುಮಾರ್ ಟಿ.ಎಂ. (ತೃತೀಯ ಬಿ.ಎಸ್ಸಿ.), ಕಾರ್ಯದರ್ಶಿಯಾಗಿ ದೀಕ್ಷಿತ್ ಬಿ.ಟಿ. (ದ್ವಿತೀಯ ಬಿ.ಎಸ್ಸಿ.), ಹಾಗೂ ಜಂಟಿ ಕಾರ್ಯದರ್ಶಿಯಾಗಿ ಮಂಜುನಾಥ್ ಪಿ.ಎಂ. (ಪ್ರಥಮ ಬಿ.ಎಸ್ಸಿ.) ಇವರು ಆಯ್ಕೆಯಾಗಿದ್ದಾರೆ. ವಿಜ್ಞಾನ ಪರಿಷತ್ಗೆ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಪ್ರಾಂಶುಪಾಲ ಪ್ರೊ. ಶಕುಂತಲಾ, ಅಧ್ಯಾಪಕ- ಅಧ್ಯಾಪಕೇತರ ವರ್ಗ ಹಾಗೂ ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ (ಕಾರ್ಮಿಕ ವಿಭಾಗ)ಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಜಿಲ್ಲಾ ಕಾರ್ಯದರ್ಶಿಯಾಗಿ ಆರ್. ರಂಗನಾಥ್, ಸಹ ಕಾರ್ಯದರ್ಶಿ ಕೆ. ಅಣ್ಣಪ್ಪ, ಯೋಗೇಶ್ಗೌಡ, ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ಹನುಮಂತಪ್ಪ ಆಯ್ಕೆಯಾಗಿದ್ದಾರೆ ಎಂದು ವಿಭಾಗದ ಅಧ್ಯಕ್ಷ ಕೆ. ದೇವೇಂದ್ರಪ್ಪ ತಿಳಿಸಿದ್ದಾರೆ.