'ಲಕ್ಷ್ಮಣಪ್ಪ ಪದಚ್ಯುತಿ ಸರಿಯಲ್ಲ'
ಕ.ಪ್ರ.ವಾರ್ತೆ ಸೊರಬ ಸೆ.3 ತಾಲೂಕು ಬಿಎಸ್ಪಿ ಪಕ್ಷದಿಂದ ಇತ್ತೀಚೆಗೆ ನಡೆದ ನೂತನ ಅಧ್ಯಕ್ಷರ ಆಯ್ಕೆ ಕುರಿತು ಪಕ್ಷದ ಹಿರಿಯ ಮುಖಂಡ ಎ. ಬಸವಣ್ಯಪ್ಪ ಗುಡವಿ ಆಕ್ಷೇಪಿಸಿದ್ದಾರೆ.
ಪಟ್ಟಣದ ನಾಮದೇವಗಲ್ಲಿಯಲ್ಲಿನ ಬಿಎಸ್ಪಿ ಕಚೇರಿಯಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಂಕವಳ್ಳಿ ಎಲ್.ಜಿ. ಗುಡ್ಡಪ್ಪ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿರುವುದು ಸಮಂಜಸವಾಗಿಲ್ಲ. ಪಕ್ಷದ ಜಿಲ್ಲಾ ಕಮಿಟಿ, ಜಿಲ್ಲಾ ಉಸ್ತುವಾರಿ ಮಂಜುನಾಥಗೌಡ ಕುಣಜಿ ಅವರು ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸದೆ, ಹಾಲಿ ಅಧ್ಯಕ್ಷರಾಗಿದ್ದ ಕೆ.ಪಿ. ಲಕ್ಷ್ಮಣಪ್ಪ ಅವರನ್ನು ಪದಚ್ಯುತಿಗೊಳಿಸಿರುವುದು ಸರಿಯಲ್ಲ ಎಂದಿದ್ದಾರೆ.
ಅಸಮರ್ಥರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಿ ಕೇವಲ 512 ಮತ ಪಡೆದು ಹೀನಾಯ ಸೋಲು ಕಂಡ ಗುಡ್ಡಪ್ಪ ಪಕ್ಷ ಸಂಘಟಿಸಲು ಅಸಮರ್ಥರು. ಪಕ್ಷದ ತತ್ವ ಸಿದ್ಧಾಂತಗಳಿಂದ ಆಚೆ ಇರುವ ಇಂತವರು ಅಧ್ಯಕ್ಷ ಸ್ಥಾನದಲ್ಲಿರುವುದು ಸರಿಯಲ್ಲ. ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಹಾಜರಿದ್ದ ಕಾರ್ಯಕರ್ತರು ಹಿಂದೆ ಅಧ್ಯಕ್ಷರಾಗಿದ್ದ ಕೆ.ಪಿ. ಲಕ್ಷ್ಮಣಪ್ಪ ಅವರೇ ಅಧ್ಯಕ್ಷರಾಗಿ ಮುಂದುವರೆಯಬೇಕು. ಇಲ್ಲದಿದ್ದರೆ ನಾವು ಪಕ್ಷದ ಸದಸ್ಯತ್ವಕ್ಕೆ ಸಾಮೂಹಿಕ ರಾಜಿನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕೆ.ಪಿ. ಲಕ್ಷ್ಮಣಪ್ಪ, ಮಂಜುನಾಥ್, ಓಂದೇವ್ ಜಡಗೆರೆ, ಸುರೇಶ್, ತುಕಾರಾಂ ನಡಹಳ್ಳಿ, ವಿ. ಧನಂಜಯ, ದಿಲೀಪ್, ಅಬ್ದುಲ್ ಘನಿ, ದಿಲ್ಶಾದ್, ಕಲ್ಪನಾ, ನೂರ್ ಜಹಾನ್ ಇದ್ದರು.