ಸ್ವಸ್ಥ ಆರೋಗ್ಯಕ್ಕೆ ಯೋಗವೇ ಮದ್ದು: ಕುಗ್ವೆ
ಕ.ಪ್ರ.ವಾರ್ತೆ, ಜೋಗ್ಫಾಲ್ಸ್, ಸೆ.3
ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಕೇವಲ ಮನುಷ್ಯ ಶಾರೀರಿಕ ಆರೋಗ್ಯದಿಂದಿದ್ದರೆ ಸಾಲದು, ಮಾನಸಿಕ ಹಾಗೂ ಸಾಮಾಜಿಕವಾಗಿಯೂ ಆರೋಗ್ಯವಂತವಾಗಿರಬೇಕಾಗುತ್ತದೆ. ಮನುಷ್ಯನ ನರಮಂಡಲಗಳನ್ನು ಹತೋಟಿಯಲ್ಲಿಡಲು ಧ್ಯಾನ, ಪ್ರಾಣಾಯಾಮ, ಯೋಗ ರೂಢಿಸಿಕೊಳ್ಳಲೇಬೇಕಿದೆ. ಸ್ವಸ್ಥ ಆರೋಗ್ಯಕ್ಕೆ ಯೋಗವೇ ಮದ್ದು ಎಂದು ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ ತಿಳಿಸಿದರು.
ಅವರು ಇಲ್ಲಿಗೆ ಸಮೀಪದ ಕಾರ್ಗಲ್ನ ಶ್ರೀ ಚೌಡೇಶ್ವರಿ ಕಲ್ಯಾಣ ಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 2013-14ನೇ ಸಾಲಿನ ಜಿಲ್ಲಾ ಮಟ್ಟದ ಯೋಗಾಸನ ಮತ್ತು ಚದುರಂಗ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ರೋಗದಿಂದ ದೂರ: ಯೋಗವು ವ್ಯಕ್ತಿತ್ವ ವಿಕಾಸ, ಆಹಾರ ಕ್ರಮ, ಕರ್ಮಯೋಗ, ಜ್ಞಾನಯೋಗ, ಪತಾಂಜಲಿ ಯೋಗ ಮುಂತಾದ ಹಲವು ವಿಧಾನಗಳನ್ನೊಳಗೊಂಡಿದ್ದು ದೈಹಿಕ ಹಾಗೂ ಮಾನಸಿಕ ಖಿನ್ನತೆಗೊಳಗಾದವರಿಗೆ ಸರ್ಮಪಕ ಜೀವನ ನಡೆಸಲು ಮಾರ್ಗದರ್ಶನ ಹಾಗೂ ಕಾಯಿಲೆ ಮನುಷ್ಯನ ಬಳಿಗೆ ಸುಳಿಯದಂತೆ ನೆರವು ಮಾಡುತ್ತದೆ. ಇಂದಿನ ಒತ್ತಡದ ಕೆಲಸಗಳ ನಡುವೆ ಮನುಷ್ಯ ಆಹಾರ, ವ್ಯಾಯಾಮ ಹಾಗೂ ವಿರಾಮಗಳಲ್ಲಿ ಸಮತೋಲನ ಕಳೆದುಕೊಂಡಿರುವುದೇ ಕಾಯಿಲೆಗೆ ಮೂಲ ಕಾರಣವಾಗಿದ್ದು, ಸಮತೋಲನ ಆಹಾರ, ವ್ಯಾಯಾಮದಿಂದ ಆರೋಗ್ಯ ಸುಧಾರಣೆ ಸಾಧ್ಯ. ವಿದ್ಯಾರ್ಥಿ ದಿನಗಳಿಂದಲೇ ಯೋಗಾಸನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ರೋಗಗಳಿಂದ ದೂರವಿರಲು ಸಾಧ್ಯ ಎಂದು ಅವರು ತಿಳಿಸಿದರು.
ಚದುರಂಗ ಸ್ಪರ್ಧೆ ಉದ್ಘಾಟಿಸಿದ ಜಿಪಂ ಸದಸ್ಯೆ ಲಲಿತಾ ನಾರಾಯಣ್, ಚದುರಂಗವು ನಮ್ಮ ಬುದ್ಧಿಮತ್ತೆಯನ್ನು ಓರೆಗೆ ಹಚ್ಚುವ ಸ್ಪರ್ಧೆಯಾಗಿದ್ದು, ಇದರಿಂದ ನಮ್ಮ ಜ್ಞಾಪನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯೆ ಜ್ಯೋತಿ ಮುರಳೀಧರ್, ಜೋಗ್-ಕಾರ್ಗಲ್ ಪಟ್ಟಣ ಪಂಚಾಯ್ತಿ ಸದಸ್ಯರಾದ ರವಿ ಲಿಂಗನಮಕ್ಕಿ, ಶ್ರೀಲತಾ ಸತ್ಯನ್, ಗಣಪ ರಾಮು, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸರೋಜಾ ವಿ. ಹೆಗಡೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್, ಸದಸ್ಯೆ ಶಿಲ್ಪ ಶಿವಾನಂದ್ ಪ್ರಭು, ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಎನ್. ಗಾವಡಿ, ಎಸ್ಜೆಎಸ್ಆರ್ವೈ ಯೋಜನೆಯ ಅಧ್ಯಕ್ಷೆ ಶ್ರೀರತ್ನ ಹಾಜರಿದ್ದರು.
ಜೋಗ್- ಕಾರ್ಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶಿಕ್ಷಣಾಧಿಕಾರಿ ಎಂ. ನಾಗರಾಜ್ ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕ ಪರಮೇಶ್ವರ ಭಂಡಾರಿ ನಿರೂಪಿಸಿದರು. ಸಾಗರ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ ಜಿ. ನಾಯ್ಕ್ ವಂದಿಸಿದರು.
ಹಲ್ಲೆ: ಆರೋಪಿ ಬಂಧನಕ್ಕೆ ಮನವಿ
ಸಾಗರ: ಹೆಗ್ಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಂತ್ರಜ್ಞ ರಾಮಮೂರ್ತಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಈ ವರೆಗೆ ಬಂಧಿಸದೆ ಇರುವುದನ್ನು ಖಂಡಿಸಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಮಂಗಳವಾರ ಪೇಟೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಹೆಗ್ಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಮೂರ್ತಿ ಎಂಬುವವರ ಮೇಲೆ ಹೈತೂರು ನಿವಾಸಿ ಕುಮಾರ್ ಎಂಬುವವರು ಏಕಾಏಕಿ ಹಲ್ಲೆ ನಡೆಸಿ, ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಹಲ್ಲೆ ನಡೆದು ಒಂದು ವಾರ ಕಳೆದರೂ ಈತನಕ ಆರೋಪಿಯನ್ನು ಬಂಧಿಸದೆ ಇರುವುದು ಖಂಡನೀಯ ಎಂದು ಮನವಿಯಲ್ಲಿ ಹೇಳಲಾಗಿದೆ.
ಕಠಿಣ ಕ್ರಮ ಜರುಗಿಸಿ: ಹಲ್ಲೆ ಮಾಡಿದ ಆರೋಪಿ ರಾಮಮೂರ್ತಿ ಅವರ ವಿರುದ್ಧ ಸುಳ್ಳು ದೂರು ದಾಖಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದರಿಂದಾಗಿ ನೌಕರರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿಯೂ ಸುಳ್ಳು ದೂರಿನಿಂದ ಸಮಸ್ಯೆ ಅನುಭವಿಸುವಂತೆ ಆಗಿದೆ. ಆರೋಪಿ ಹೊರಗೆ ತಿರುಗುತ್ತಿರುವುದೆ ಪಿತೂರಿ ನಡೆಸಲು ಕಾರಣವಾಗಿದ್ದು, ಪೊಲೀಸರು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮ.ಸ.ನಂಜುಂಡಸ್ವಾಮಿ, ತಾ. ಸಂಘದ ಅಧ್ಯಕ್ಷನಾಗಭೂಷಣ್, ಉಪಾಧ್ಯಕ್ಷ ಡಿ. ಗಣಪತಪ್ಪ, ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ, ಬಸವರಾಜ್, ಕೆ. ವಿಜಯಕುಮಾರ್, ವೈ. ಮೋಹನ್, ಸವಿತಾ, ಸುರೇಶ್ ಇನ್ನಿತರರು ಹಾಜರಿದ್ದರು.