ಹೈನುಗಾರಿಕೆಯಿಂದ ಉತ್ತಮ ಆದಾಯ
ಕ.ಪ್ರ.ವಾರ್ತೆ, ಶಿಕಾರಿಪುರ, ಸೆ.3 ಹೈನುಗಾರಿಕೆ ಕೃಷಿಗೆ ಪೂರಕವಾಗಿದ್ದು, ಗ್ರಾಮೀಣ ಜನರ ಅವಿಭಾಜ್ಯ ಅಂಗವಾಗಿದೆ. ಮಾತ್ರವಲ್ಲದೆ ಹೈನುಗಾರಿಕೆ ಮೂಲಕ ಉತ್ತಮ ಆದಾಯ ಗಳಿಸಿ, ತಾಲೂಕಿನ ಅಂಬಾರಗೊಪ್ಪದ ಜನ ಮಾದರಿಯಾಗಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಶೇಖರಪ್ಪ ತಿಳಿಸಿದರು.
ತಾಲೂಕಿನ ಅಂಬಾರಗೊಪ್ಪದ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘಗಳು ಗ್ರಾಮೀಣ ಜನರ ಉಳಿತಾಯದ ಮನೋಭಾವ ಮೂಡಿಸುವ ಆರ್ಥಿಕ ಚಟುವಟಿಕೆಯ ಕೇಂದ್ರವಾಗಿದೆ. ಇಂತಹ ಕೇಂದ್ರದ ಮೂಲಕ ಗ್ರಾಮದ ಪ್ರತಿಯೊಂದು ಕುಟುಂಬ ಹೈನುಗಾರಿಕೆಗೆ ಹೆಚ್ಚಿನ ಮಹತ್ವ ನೀಡಿ, ಎಲ್ಲರಲ್ಲಿಯೂ ಉಳಿತಾಯದ ಸ್ವಭಾವ ರೂಢಿಸಿದೆ ಎಂದರು.
ಹೆಚ್ಚಿನ ಪ್ರೋತ್ಸಾಹ: ಕಳೆದ ಕೆಲ ವರ್ಷದಿಂದ ತಾಲೂಕಿನ ಅಂಬಾರಗೊಪ್ಪ ಹಾಲು ಉತ್ಪಾದಕರ ಸಹಕಾರಿ ಸಂಘ ಅತ್ಯುತ್ತಮ ಸಹಕಾರಿ ಸಂಘವಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡು ಹೆಚ್ಚಿನ ವಹಿವಾಟು ನಡೆಸಿ ಗ್ರಾಮೀಣ ಜನರಲ್ಲಿ ಉಳಿತಾಯದ ಬಗ್ಗೆ ಹೆಚ್ಚು ಪ್ರೋತ್ಸಾಹಿಸುತ್ತಿದೆ ಎಂದ ಅವರು, ಈ ದಿಸೆಯಲ್ಲಿ ಕೃಷಿಗೆ ಪೂರಕವಾಗಿ ಹೈನುಗಾರಿಕೆ ಅವಲಂಬಿಸಿ, ಸ್ವಾಭಿಮಾನದ ಬದುಕನ್ನು ರೂಪಿಸಿದೆ ಎಂದರು.
ಸಂಘದ ಅಧ್ಯಕ್ಷ ದೇವೇಂದ್ರಪ್ಪ ಶೀತಲೀಕರಣ ಕೇಂದ್ರಕ್ಕೆ ಹೆಚ್ಚಿನ ಹಾಲು ನೀಡಿ, ಪ್ರಥಮ ಪ್ರಶಸ್ತಿ ಮೂಲಕ ಮಾರ್ಗದರ್ಶಕರಾಗಿದ್ದಾರೆ. ಇತ್ತೀಚಿನ ವರ್ಷದಲ್ಲಿ ರಾಜ್ಯ ಸರ್ಕಾರ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಾಲಿಗೆ ಹೆಚ್ಚಿನ ಪ್ರೋತ್ಸಾಹ ಧನ ಮತ್ತಿತರರ ಹಲವು ಯೋಜನೆಯನ್ನು ರೂಪಿಸಿದ್ದು, ಇದರ ಸದುಪಯೋಗಕ್ಕೆ ಯುವ ಪೀಳಿಗೆ ಚಿಂತನೆ ನಡೆಸಬೇಕಾಗಿದೆ ಎಂದರು.
ಉತ್ತಮ ಹೆಸರು: ಅಧ್ಯಕ್ಷತೆ ವಹಿಸಿದ್ದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ಸಂಘ ಆರಂಭದಿಂದಲೂ ಸತತ ಲಾಭದ ಮೂಲಕ ತಾಲೂಕು ಹಾಗೂ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದುಕೊಂಡಿದೆ. ಈ ಕಾರ್ಯಕ್ಕೆ ಸದಸ್ಯರ ಸಹಕಾರವನ್ನು ಶ್ಲಾಘಿಸಿದ ಅವರು, ಕಳೆದ ವರ್ಷ ರು. 1.33 ಲಕ್ಷ ಲಾಭಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ರು. 2.48 ಲಕ್ಷ ನಿವ್ವಳ ಲಾಭದ ಮೂಲಕ ಉತ್ತಮ ಸಂಘ ಎಂಬ ಹೆಸರು ಉಳಿಸಿಕೊಂಡಿದೆ ಎಂದರು. ಇದೇ ಸಂದರ್ಭದಲ್ಲಿ ಸಂಘದ ರು. 100 ಮುಖಬೆಲೆಯ ಶೇರುಗಳನ್ನು ರು. 500 ಕ್ಕೆ ಹೆಚ್ಚಿಸಲು ಸರ್ವ ಸದಸ್ಯರು ಸಮ್ಮತಿಸಿ ಸೂಚಿಸಿದರು. ಕೆಎಂಎಫ್ ನಿರ್ದೇಶಕ ಶಿವಶಂಕರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಾಜಣ್ಣ, ಕಾರ್ಯದರ್ಶಿ ರಾಮಚಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.