ಪಶು ವೈದ್ಯ ವಿದ್ಯಾರ್ಥಿಗಳ ಧರಣಿ ಆರಂಭ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸೆ.4
ಭಾರತೀಯ ಪಶುವೈದ್ಯ ಪರಿಷತ್ತಿನ ಮಾನ್ಯತೆ ಸಿಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿರುವ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಬುಧವಾರದಿಂದ ಅನಿರ್ಧಿಷ್ಟ ಮುಷ್ಕರ ಆರಂಭಿಸಿದ್ದಾರೆ.
ಕಾಲೇಜಿನ ಎಲ್ಲಾ 183 ವಿದ್ಯಾರ್ಥಿಗಳೂ ಹೋರಾಟದಲ್ಲಿದ್ದರು. ಕಾಲೇಜಿನ ಎದುರಿನಲ್ಲಿಯೇ ಮುಷ್ಕರ ಆರಂಭಿಸಿದ ವಿದ್ಯಾರ್ಥಿಗಳ ಮನವೊಲಿಸಲು ಬೀದರ್ ಪಶುವೈದ್ಯ ವಿವಿಯಿಂದ ಆಗಮಿಸಿದ್ದ ತಂಡ ವಿಫಲರಾಗಿ ಹಿಂದಿರುಗಬೇಕಾಯಿತು.
ಪ್ರೊ. ಕೃಷ್ಣಸ್ವಾಮಿ, ಪ್ರೊ. ಕೃಷ್ಣಮೂರ್ತಿ, ಪ್ರೊ. ರಂಗನಾಥ್, ಪ್ರೊ. ಸಿ.ಪಿ. ಸಿಂಗ್ ಅವರು ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, 15 ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ. ಪ್ರತಿಭಟನೆ ಹಿಂಪಡೆಯಿರಿ ಎಂದು ತಿಳಿಸಿದರು. ಈ ರೀತಿಯ ಆಶ್ವಾಸನೆಯನ್ನು ಹಲವು ವರ್ಷದಿಂದ ನೀಡುತ್ತಿದ್ದೀರಿ. ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ ಐವಿಸಿ ಮಾನ್ಯತೆ ಸಿಗುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ. 15 ದಿನದಲ್ಲಿ ಸಿಗುತ್ತದೆ ಎನ್ನುವುದಾದರೆ ಅಲ್ಲಿಯವರೆಗೂ ಧರಣಿ ಮುಂದುವರಿಸುತ್ತೇವೆ. ಮಾನ್ಯತೆ ಸಿಕ್ಕನಂತರವೇ ಪ್ರತಿಭಟನೆ ಹಿಂಪಡೆಯುತ್ತೇವೆ ಎಂದರು.
ಪ್ರೊಫೆಸರ್‌ಗಳ ತಂಡ, ಸದ್ಯವೇ ಕರ್ನಾಟಕ ಪಶುವೈದ್ಯ ಪರಿಷತ್ತಿನ ತಾತ್ಕಾಲಿಕ ಮಾನ್ಯತೆ ಸಿಗಲಿದೆ ಎಂದಾಗ, ಈ ಬಾರಿಯೂ ನೀವು ಕಾಲೇಜಿಗೆ ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದೀರಿ ಹೊರತು ಈಗಾಗಲೇ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಚರ್ಚೆ ಫಲ ಕಾಣದೇ ಪ್ರೊಫೆಸರ್‌ಗಳ ತಂಡ ಹಿಂದಿರುಗಬೇಕಾಯಿತು.
ಬೆಳಗಿನಿಂದ ಸಂಜೆಯ ವರೆಗೂ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಗುರುವಾರವೂ ಮುಂದುವರಿಸಲು ನಿರ್ಧರಿಸಿದ್ದಾರೆ.