ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ಇರಲಿ
ಸಾಗರ: ಉಳಿದ ಭಾಷೆಗಳಿಗಿಂತ ಕನ್ನಡ ಭಾಷೆಗೆ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಸಂದಿರುವುದಕ್ಕೆ ನಾವು ಹೆಮ್ಮೆಪಟ್ಟುಕೊಳ್ಳಬೇಕು ಎಂದು ಸಾಹಿತಿ ಡಾ.ನಾ. ಡಿಸೋಜ ಹೇಳಿದರು.
ಇಲ್ಲಿನ ಸೇವಾಸಾಗರ ಶಾಲೆಯಲ್ಲಿ ಬುಧವಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣಗೊಳಿಸಿ, ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳನ್ನು ಜ್ಞಾನಕೋಶದೊಳಗೆ ಭದ್ರಪಡಿಸಿಕೊಂಡು, ಆಗಾಗ ಪುನರ್ ಮನನ ಮಾಡಿಕೊಳ್ಳುತ್ತಿರಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಹಿತ್ಯ, ಸಂಸ್ಕೃತಿ ಕುರಿತ ಆಸಕ್ತಿ ಕಡಿಮೆಯಾಗುತ್ತಿದೆ. ಓದುವ ಹವ್ಯಾಸವೂ ನಮ್ಮಿಂದ ದೂರ ಸರಿಯುತ್ತಿದೆ. ನಾಡುನುಡಿ, ಸಂಸ್ಕೃತಿಗೆ ತಮ್ಮನ್ನು ಮುಡಿಪಾಗಿ ಇರಿಸಿಕೊಂಡವರ ಬಗ್ಗೆ ನಮಗೆ ಮಾಹಿತಿಯೆ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿರುವ ಹೊತ್ತಿನಲ್ಲಿ ಸೇವಾಸಾಗರ ವಿದ್ಯಾಸಂಸ್ಥೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ತೆಗೆದುಕೊಂಡ ನಿರ್ಣಯ ಸ್ವಾಗತಾರ್ಹ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸೇವಾಸಾಗರ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು.ಎಚ್. ರಾಮಪ್ಪ, ನಮ್ಮ ಭಾಷೆ ಹಾಗೂ ಸಂಸ್ಕೃತಿಯ ಮೇಲೆ ನಾವು ಗೌರವಾಧರ ಹೊಂದಿರಬೇಕು. ಶಿಕ್ಷಣದ ಜೊತೆಗೆ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಎನ್. ನಾರಾಯಣಮೂರ್ತಿ, ಲೇಖಕ ವಿಲಿಯಂ, ವೈ.ಎ. ದಂತಿ, ಗವಿಯಪ್ಪ, ಐ.ವಿ. ಹೆಗಡೆ ಇದ್ದರು.