ಆಚರಣೆಯಿಲ್ಲದೆ ಧರ್ಮದ ಉಳಿವು ಅಸಾಧ್ಯ
ಭದ್ರಾವತಿ: ಯಾವುದೇ ಧರ್ಮವಾದರೂ ಅದರ ಸಂಪ್ರದಾಯ, ಸಂಸ್ಕಾರಗಳ ನಿರಂತರ ಆಚರಣೆಯಿಲ್ಲದೆ ಅದರ ಉಳಿವು ಅಸಾಧ್ಯವೆಂದು ಶ್ರೀಮದ್ ರಂಭಾಪುರಿ ಶಾಖಾ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿ ತಿಳಿಸಿದರು.
ಗುರುವಾರ ಪಟ್ಟಣದ ವೀರಶೈವ ಸಭಾ ಭವನದಲ್ಲಿ ವೀರಶೈವ ಸೇವಾ ಸಮಿತಿ ಏರ್ಪಡಿಸಿದ್ದ ಶ್ರಾವಣ ಮಾಸದ ಕುಂಭಾಭಿಷೇಕ ಹಾಗೂ ರುದ್ರಾಭಿಷೇಕದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ದೇವರ ದಿಕ್ಕು ಈಶಾನ್ಯ ಎಂದು ವಾಸ್ತು ಪ್ರತಿಪಾದಿಸುವುದಾದರೂ ದೈವ ಸರ್ವಾಂತರ್ಯಾಮಿ ಎಂಬುದು ಸಾರ್ವತ್ರಿಕ ವಾದ.
ಇಂದಿನ ದಿನಗಳಲ್ಲಿ ಮನೆಯಲ್ಲಿ ಸಾಕುವ ನಾಯಿಗೆ ನೀಡುವ ಪ್ರಾಮುಖ್ಯತೆ ಹೆತ್ತ ತಂದೆತಾಯಿಗಳಿಗೆ ನೀಡುತ್ತಿಲ್ಲ. ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಠ ಪ್ರಾರಂಭವಾಗಿದೆ ಎಂದು ವಿಷಾದಿಸಿದರು.
ಸಮಾರಂಭ ಉದ್ಘಾಟಿಸಿದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ಸಮಾಜದವರು ಪ್ರತಿವರ್ಷ ಶ್ರಾವಣ ಮಾಸದ ಕಾರ್ಯಕ್ರಮವನ್ನು ಆಯೋಜಿಸುತ್ತಾರಾದರೂ ಇದಕ್ಕೆ ನಿರೀಕ್ಷಿತ ಸ್ಪಂದನೆ ಸಮಾಜದ ಜನರಿಂದ ಬರುತ್ತಿಲ್ಲವೆಂದರು. ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಚ್ರದ್ರಶೇಖರಯ್ಯ ಧರ್ಮದ ವಿಷಯಗಳತ್ತ ಗಮನಹರಿಸಬೇಕಾದವರು ಇಂದು ಬೇರೆ ವಿಷಯಗಳತ್ತ ಗಮನ ಹರಿಸತೊಡಗಿರುವ ಪರಿಣಾಮ ಧಾರ್ಮಿಕ ವಿಷಯಗಳಲ್ಲಿ ಜನರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ತಡವಾಗಿ ಬಂದ ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ಮಕ್ಕಳು ವಿದ್ಯಾವಂತರಾಗುವುದರೊಂದಿಗೆ ಪ್ರಜ್ಞಾವಂತರಾಗಿ ಸಮಾಜದ ಸಂಪ್ರದಾಯಗಳನ್ನು ಪಾಲಿಸಲು ಕರೆನೀಡಿದರು. ತರೀಕೆರೆಯ ಜಗದೀಶ್ವರ ಶಿವಾಚಾರ್ಯ ಸ್ವಾಮಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳಿಗೆ ವಿನಯ ಮುಖ್ಯವೆಂದರು.
ಶ್ರಾವಣ ಮಾಸ ಪೂಜಾ ಸಮಿತಿ ಅಧ್ಯಕ್ಷ ಜಿ.ಎಸ್. ರೇವಣ್ಣ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ. ವೀರಭದ್ರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಭದ್ರಾ ವೀರಶೈವ ಸೌಹಾರ್ದ ಸಂಘದ ಅಧ್ಯಕ್ಷ ಡಾ.ಜಿ.ಎಂ.ನಟರಾಜ್, ಜಿ.ಎಸ್. ಸತೀಶ್, ಹ.ಬ. ವೀರಬಸಪ್ಪ ಮೊದಲಾದವರು ಇದ್ದರು.