ಮುಖ್ಯಮಂತ್ರಿಗೆ ತಳ್ಳಾಟ, ನೂಕಾಟದ ಸ್ವಾಗತ
ಶಿವಮೊಗ್ಗ: ಸಿಎಂ ಸಿದ್ದರಾಮಯ್ಯನವರಿಗೆ ಬುಧವಾರ ಶಿವಮೊಗ್ಗದಲ್ಲಿ ಸಿಕ್ಕಿದ್ದು ತಳ್ಳಾಟ ನೂಕಾಟದ ಸ್ವಾಗತ.
ಅಲ್ಲಿ ಎಳ್ಳಷ್ಟು ಶಿಸ್ತಿರಲಿಲ್ಲ. ಒಂದೆಡೆ ಘೋಷಣೆ, ಮತ್ತೊಂದು ಕಡೆ ದಾರಿ ಬಿಡಿ ಎಂಬ ರಕ್ಷಣಾ ಸಿಬ್ಬಂದಿಯ ಅರಚಾಟ. ನಾಮುಂದು, ತಾಮುಂದು ಎಂದು ಸಿಎಂಗೆ ಹಾರ ತುರಾಯಿ ಆರ್ಪಿಸಲು ನೂಕು ನುಗ್ಗಲು. ಅಷ್ಟೇ ಅಲ್ಲ, ಪೊಲೀಸರ ಗೌರವ ವಂದನೆ ಸ್ವೀಕಾರಕ್ಕೂ ಅಡಚಣೆ...
ಇದೆಲ್ಲಾ ನಡೆದಿದ್ದು ಶಿವಮೊಗ್ಗದ ಹೆಲಿಪ್ಯಾಡ್‌ನಲ್ಲಿ. ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ವಿವಿಧ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಕ್ಯಾಪ್ಟರ್‌ನಿಂದ ಇಳಿಯುತ್ತಿದ್ದಂತೆ ನುಗ್ಗಿಬಂದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗುತ್ತಾ ಸುತ್ತುವರಿದರು. ಅಲ್ಲೇ ಇದ್ದ ಪೊಲೀಸರು ಅವರನ್ನು ನಿಯಂತ್ರಿಸಲಾಗದೆ ಪಡಿಪಾಟಲು ಪಟ್ಟರು. ನೂರಾರು ಸಂಖ್ಯೆಯಲ್ಲಿ ಪೊಲೀಸರು ಹೆಲಿಪ್ಯಾಡ್ ಹಾಗೂ ಪ್ರವಾಸಿ ಮಂದಿರವನ್ನು ಸುತ್ತುವರಿದಿದ್ದರೂ ಸಹ ಪರಿಸ್ಥಿತಿ ನಿಯಂತ್ರಿಸಲಾರದೇ ಹೋದರು. ಹೀಗಾಗಿ ತಳ್ಳಾಟದ ನಡುವೆಯೇ ಮುಖ್ಯಮಂತ್ರಿ ಪೊಲೀಸ್ ಗೌರವ ವಂದನೆ ಸ್ವೀಕರಿಸಬೇಕಾಗಿಬಂತು.
ಗೌರವ ವಂದನೆ ಸ್ವೀಕಾರದ ನಂತರ ಮತ್ತೆ ತಳ್ಳಾಟ. ಕಾಂಗ್ರೆಸ್ ಕಾರ್ಯಕರ್ತರು, ಮರಿ ನಾಯಕರು ಸಿಎಂ ಹಿಂದೆ ಮುಂದೆ ನುಗ್ಗಲು ಮುಂದಾದರು.